Wednesday, January 14, 2015

ಬೆರಣಿ ಭಾಸ್ಕರ

ಶವದ ಶುದ್ಧಿಯಾಗಿತ್ತು. ಬಂಧು ಬಾಂಧವರು ತುಳಸಿ ಕುಡಿಯಲ್ಲಿ ನೀರು ಬಿಟ್ಟೂ ಆಗಿತ್ತು. ಅಂತಿಮ ಯಾತ್ರೆಗೆ ಊರ ಅರ್ಚಕರು ಇಟ್ಟಿದ್ದ ಘಳಿಗೆಯೂ ಹತ್ತಿರವಾಗಿತ್ತುಎಲ್ಲರ ದೃಷ್ಟಿ ಅತ್ತ ಕಡೆಯೇ ನೆಟ್ಟಿತ್ತು. ಛೇ.., ಇವ ಎಲ್ಲಿ ಹೋದ..? ಬರಬೇಕಿತ್ತಲ್ವಾ ಇಷ್ಟೊತ್ತಿಗೆ.

ಟಿಂಗ್ .., ಟಾಂಗ್.. ಬಂದೇ ಬಿಟ್ಟ. ಸೈಕಲ್ ಕ್ಯಾರಿಯರ್ನಿಂದ ಇಳಿಸಿಯೇ ಬಿಟ್ಟ. ಒಂದು ಗೋಣಿ ಬೆರಣಿ ಜೊತೆ ಬಂದವ ಬೆರಣಿ ಭಾಸ್ಕರ.

ಎಲ್ಲಿ ಮಾರಯಾ..? ಎಷ್ಟೊತ್ತು..? ಕಾಶೀನಾಥರೇ ಕ್ಷಮಿಸಿ, ಬರ್ಬೇಕಾದ್ರೆ ಜೋರು ಮಳೆ. ಬೆರಣಿ ಒದ್ದೆಯಾಗ್ಬಾರದು ಅಂತ ನಿಂತೆ ಅಂದ ಭಾಸ್ಕರ. ಬೆರಣಿ ಗೋಣಿ ಹೆಗಲೇರಿಸಿ ಹೊರಟ. ವಿಶ್ವನಾಥ ಭಟ್ಟರ ಶವದ ಯಾತ್ರೆಯೂ ಹೊರಟಿತು.

ವಿಧಿ ವಿಧಾನ ಮುಗಿಯೋ ತನಕ ಭಾಸ್ಕರ ಬೆರಣಿಯ ದುಡ್ಡು ಮುಟ್ಟುವುದಿಲ್ಲ. ಎಲ್ಲಾ ಮುಗಿಯುವವರೆಗೆ ಮನೆಯವರ ಜೊತೆಗಿದ್ದು, ಜೀವನದಲ್ಲಿ ಮುಂದೆಂದೂ ತನಗೆ ಸಿಗಲು ಸಾಧ್ಯವೇ ಇರದ ಪರಮ ಪುಣ್ಯವನ್ನು ಬೇರೆಯವರ ಕಾರ್ಯದಲ್ಲಿ ತೊಡಗಿಸಿಕೊಂಡು ಪಡೆಯುತ್ತಿದ್ದ. ಕಾಶೀನಾಥರು 350 ರೂಪಾಯಿ ಕೊಟ್ಟರು. ಭಾಸ್ಕರ ಸೈಕಲ್ ಏರಿದ.

ಹುಟ್ಟುವಾಗ ಬಡವನಾಗಿ ಹುಟ್ಟು. ಅದು ನೀನೋ, ನಿನ್ನಪ್ಪನೋ ಮಾಡಿದ ಕರ್ಮ. ಆದ್ರೆ ಸಾಯುವಾಗಲೂ ಬಡವನಾಗಿ ಸತ್ತರೆ ನಿನ್ನಷ್ಟು ಮೂರ್ಖರಿಲ್ಲ ಜಗದಲಿ.. ಭಧ್ರಗಿರಿ ಅಚ್ಯುತದಾಸರು ಹರಿಕಥೆಯ ನಡುವೆ ಹೇಳಿದ್ದ ಮಾತು ಭಾಸ್ಕರನಿಗೆ ಇನ್ನೂ ಮರೆತಿರಲಿಲ್ಲ. ಅದು ಅವನ ಮನಸ್ಸಿಗೆ ನಾಟಿತ್ತು. ಅದೇ ಅವನ ಜೀವನದ ಪಾಠ.

ಅಮ್ಮಾ.., ಊಟಾ....

ಅಂಗಳಕ್ಕೆ ಬಂದಿಲ್ಲ.., ಸೈಕಲ್ಲಿಂದ ಇಳಿದಿಲ್ಲ. ಹಸಿವಾಗ್ತಿದೆ ಅಮ್ಮಾ.., ನಂಗೂ ಹಸಿವಾಗ್ತಿದೆ.., ನಿನ್ಗೋಸ್ಕರ ನಾನೂ ಕಾದಿಲ್ವೇನೋ.., ಮನೆಯೊಳಗಿಂದ ಹೊರಬಂದಳು ಪಾರ್ವತಿ. ಪಾರ್ವತಿ ಭಾಸ್ಕರನ ತಾಯಿ. ಪಾರ್ವತಿ ಗಂಡ ಪ್ರಾಣೇಶ ಪ್ರಾಣಬಿಟ್ಟ ಮೇಲೆ ಈಕೆಗೆ ಭಾಸ್ಕರನೇ ಜಗತ್ತು. ಇವನಿಗೆ ಅಮ್ಮನೇ ಸಂಪತ್ತು.

ಭಾಸ್ಕರನಿಗೆ ಭಾಸ್ಕರ ಅಂತ ಹೆಸರಿಡಲು ಇನ್ನೂ ಆರು ತಿಂಗಳು ಬಾಕಿಯಿತ್ತು. ಮನೆಗಿನ್ನೂ ಮೂರನೇ ಜೀವ ಬಂದಿರಲಿಲ್ಲ. ಆದ್ರೂ ನಾವು ಮೂರು ಮಂದಿ.., ನಾವು ಮೂರು ಮಂದಿ ಅಂತ ಹೇಳುತ್ತಾ ಓಡಾಡುತ್ತಿದ್ದ ಪ್ರಾಣೇಶ. ಮಗುವೆಂದರೆ ಪ್ರಾಣವೇ ಬಿಡುತ್ತಿದ್ದ. ಆದ್ರೆ ಮಗು ಮನೆ ಸೇರುವ ಮೊದಲೇ ಪ್ರಾಣೇಶ ಮಸಣ ಸೇರಬೇಕಾಯ್ತು. ಬ್ಲಡ್ ಕ್ಯಾನ್ಸರ್ ಅವನನ್ನು ಬಲಿ ತೆಗೆದುಕೊಂಡಿತ್ತು.

ಪಾರ್ವತಿ 6 ತಿಂಗಳು ಏಕಾಂಗಿ. ಆಕೆಯ ಛಲ- ಭಾಸ್ಕರನ ರಕ್ತದಲ್ಲಿ ಬೆರೆತಿತ್ತು. ಅದೇ ಛಲ ಭಾಸ್ಕರನನ್ನು ನಾಲ್ಕು ಗಂಟೆಗೆ ಎಬ್ಬಿಸುತ್ತಿತ್ತು. ಬೆರಣಿ ತಟ್ಟಿಸುತ್ತಿತ್ತು. ವ್ಯಾಪಾರ ಮಾಡಿಸುತ್ತಿತ್ತು. ಏಳುವಾಗ ನಾಲ್ಕೂವರೆ ಆಗಿಬಿಟ್ಟರೆ, ಎದುರು ಮನೆ ಮಹೇಶ ಇಡೀ ಊರಿನ ಸೆಗಣಿಯನ್ನು ಹೆಕ್ಕಿ ಬಿಡುತ್ತಿದ್ದ. ನೀರು ಕಲಸಿ ತೆಂಗಿನ ಬುಡಕ್ಕೆ ಸುರಿದು, ಮತ್ತೊಂದು ನಿದ್ದೆ ಮಾಡುತ್ತಿದ್ದ. ಬೆರಣಿಗೆ ಬೇಕಲ್ಲಾ ಸೆಗಣಿ. ಹ್ಮೂ...! ಅಂದು ಇವ ಬರೀ ಭಾಸ್ಕರ.. ಭಾಸ್ಕರನಿಗೆ ಬೇಸರದ ಮೋಡ ಕವಿಯುತ್ತಿತ್ತು.

ಭಾಸ್ಕರನ ಬೆರಣಿ ಮಾಮೂಲಿ ಬೆರಣಿಯಲ್ಲ. ಅದು ಛಲದ ಬೆರಣಿ. ಪ್ರತಿ ಬೆರಣಿಯನ್ನು ಅಮ್ಮನ ಖಾಲಿ ಹಣೆಗೋ, ಕರಿಮಣಿಯಿಲ್ಲದ ಕೊರಳಿಗೋ, ಬಳೆಗಳಿಲ್ಲದ ಕೈಗಳಿಗೋ ತಟ್ಟುತ್ತಿದ್ದ. ವಿಧವೆ ಅಮ್ಮನಿಗೊಂದು ಮದುವೆ ಮಾಡಿಸಬೇಕೆಂಬ ಛಲದಿಂದ ತಟ್ಟುತ್ತಿದ್ದ - ತಿರುವಿ ಹಾಕುತ್ತಿದ್ದ - ಮಾರುತ್ತಿದ್ದ ಛಲದ ಬೆರಣಿ.

ಅಮ್ಮನ ಮೇಲೆ ಓರಗೆಯವರು ಕಣ್ಣು ಹಾಕಿದರೆ ಯಾವ ಮಗ ಸುಮ್ಮನಿರ್ತಾನೆ. ಇವ ಸುಮ್ಮನಿರಲೇಬೇಕಾದ ವಯಸ್ಸಿನವ. ಸುಮ್ಮನಿರುತ್ತಿದ್ದ. 27 ವಯಸ್ಸಿಗೆ ಬರಬೇಕಾದ ಬುದ್ಧಿ.., ಭಾಸ್ಕರನಿಗೆ 7ನೇ ವಯಸ್ಸಿಗೆ ಬಂದುಬಿಟ್ಟಿತ್ತು. ಅಮ್ಮನಿಗೊಂದು ಮದುವೆ ಮಾಡುವ ನಿರ್ಧಾರ ಮಾಡಿದ್ದ. ಅಮ್ಮನಿಗೂ ಅದನ್ನು ಹೇಳಿದ್ದ.

ಛಲಗಾರ್ತಿ ಪಾರ್ವತಿ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಮಗನನ್ನು ಬೆಳೆಸಿದಳು. ನೀನೇ ಮುಂದೆ ನಿಂತು ಮದುವೆ ಮಾಡು. ನಿನ್ನ ಇಷ್ಟ ನನ್ನಿಷ್ಟ. ಎಷ್ಟು ದಿನ ಕಷ್ಟ. ಹದ್ದುಗಳ ಕಣ್ಣು ಪಾರ್ವತಿಯನ್ನು ಕುಕ್ಕುತ್ತಿತ್ತು.. ನಿತ್ಯ ಆಕೆಯನ್ನು ಕುಗ್ಗುವಂತೆ ಮಾಡುತ್ತಿತ್ತು.

ಮನೆಯ ಹಿಂದಿನ ಜಾಗದಲ್ಲಿ ಭಾಸ್ಕರನ ಬೆರಣಿ ಗೋಡಾನ್. ಕುಟ್ಟಿ ಶೆಟ್ಟರ ಅಂಗಡಿಯ ನೀರುಳ್ಳಿ ಗೋಣಿ 2 ರೂಪಾಯಿಗೆ ಮಾರಾಟವಾಗುತ್ತದೆ. ಭಾರೀ ಡಿಮ್ಯಾಂಡ್ ನೀರುಳ್ಳಿ ಗೋಣಿಗೆ. ತಂದೆಯಿಲ್ಲದ ಭಾಸ್ಕರನನ್ನು ಕಂಡರೆ ಶೆಟ್ರಿಗೆ ಅಕ್ಕರೆ. ನೀರುಳ್ಳಿ ಗೋಣಿ ಜೊತೆ ಸಕ್ಕರೆಯ ಗೋಣಿಯನ್ನೂ ಮಡಚಿ ಮೂಲೆಯಲ್ಲಿಟ್ಟು ಭಾಸ್ಕರನಿಗೆ ಕಾಯುವಷ್ಟು ಅಕ್ಕರೆ. ಗೋಣಿ ಕ್ಯಾರಿಯರ್ನಲ್ಲಿಟ್ಟು, ಒಂದು ಜೇನು ಮಿಠಾಯಿ ಕೊಟ್ಟು, ಒಂದೇ ರೂಪಾಯಿ ತೆಗೆದುಕೊಳ್ಳುತ್ತಿದ್ದರು.. ಗೋಣಿಗೂ ಮಿಠಾಯಿಗೂ.

ಬೀಡಿ ಬ್ರಾಂಚಿನ ಹರೀಶ ಪಾರ್ವತಿಯ ಮಾವನ ಮಗ. ಪ್ರಾಣೇಶನಿಗೆ ಪಾರ್ವತಿಯನ್ನು ಕೊಟ್ಟಾಗ ಅತ್ತೆ ಮಗಳ ಮದುವೆಗೆ ಬಾರದೆ ಕುಳಿತವ. ಪ್ರಾಣೇಶ ತೀರಿಹೋದ ಮೇಲೆ ಪಾರ್ವತಿಗೆ ಧೈರ್ಯ ಕೊಟ್ಟವ. ಕೆಲಸ ಕೊಟ್ಟವ. ಬದುಕಿಗೊಂದು ಶಕ್ತಿ ಕೊಟ್ಟವ. ಸಂಬಂಧ ಪ್ರಕಾರ ಭಾಸ್ಕರನಿಗೆ ಹರೀಶ ದೊಡ್ಡಪ್ಪ. ಅಪ್ಪನ ಸ್ಥಾನದಲ್ಲಿ ನಿಂತು ಭಾಸ್ಕರನಿಗೆ ಮದುವೆ ಮಾಡಬೇಕಾದ ಹರೀಶ.., ಭಾಸ್ಕರನಲ್ಲಿ ನಿನ್ನಮ್ಮನನ್ನು ನನಗೆ ಮದುವೆ ಮಾಡಿಕೊಡುವೆಯಾ.. ಎಂದರೆ..? ಎಂದರೇನು..? ಎಂದೇ ಬಿಟ್ಟ.. ಭಾಸ್ಕರ ಸ್ಥಬ್ಧ.

ರಾತ್ರಿ ಜಗಲಿ ಮೇಲೆ ಮಲಗಿ ಆಕಾಶ ನೋಡುತ್ತಿದ್ದಾಗ, ಮಾವನ ಮಾತು ಭಾಸ್ಕರನ ಮನದಲ್ಲಿ ಮಿನುಗಿತು. ಕೋಟಿ ನಕ್ಷತ್ರಕ್ಕೆ ಆಕಾಶದಾಶ್ರಯ. ಮನೆಯಲ್ಲಿರುವ ಒಂಟಿ ನಕ್ಷತ್ರಕ್ಕೆ..? ಪೂರ್ವದಲ್ಲಿ ಚಂದಿರ ಮೂಡಿದ. ಬಾಸ್ಕರ ಮನೆಯೊಳಗೆ ಓಡಿದ. ಅವನ ಮನಸ್ಸು ಹುಣ್ಣಿಮೆಯಾಯ್ತು. ಅಮ್ಮನ ಮದುವೆ ನಿಶ್ಚಿಯವಾಯ್ತು.

ಕಾಶೀನಾಥರ ತಂದೆಯ ಅಂತ್ಯ ಸಂಸ್ಕಾರಕ್ಕೆ ಘಳಿಗೆ ನೋಡಿದ್ದ ಗೋಪಾಲ ಭಟ್ಟರೇ ಭಾಸ್ಕರನ ಬದುಕಿನ ಸಾರ್ಥಕತೆಯ ಕ್ಷಣಕ್ಕೆ ಮುಹೂರ್ತವಿಟ್ಟರು. ಭಾಸ್ಕರ ಬೆರಣಿ ತಟ್ಟಿದ ಕೈಯ್ಯಲ್ಲಿ ಮನೆಗೆ ತೋರಣ ಕಟ್ಟಿದ. ತೆಂಗಿನ ಕಾಯಿಯಿಂದ ಮುಚ್ಚಿದ ಕಲಶದಲ್ಲಿ ತಾಯಿಗೆ ಧಾರೆಯೆರೆದ. ಅರಶಿನ ಕುಂಕುಮ ಬೆರೆತ ಅಕ್ಷತೆ ಕಾಳುಗಳನ್ನು ತಾಯಿಯ ತಲೆ ಮೇಲೆ ಮಳೆಗರೆದ. ಅಕ್ಷತೆ ಪಾರ್ವತಿಯ ನೆತ್ತಿಯಿಂದ ಪಾದದತ್ತ ಉದುರುತ್ತಿತ್ತು. ಉದುರಿದ ಅಕ್ಷತೆ ನೆಲದಿಂದ ಚಿಮ್ಮುತ್ತಿತ್ತು. ಮಂಟಪದ ಕಂಬಕ್ಕೊರಗಿ ನಿಂತಿದ್ದ ಭಾಸ್ಕರ ಕುಸಿದುಬಿಟ್ಟ.., ಬೆರಣಿ ಭಾಸ್ಕರ ಭೂಮಿ ಬಿಟ್ಟ.

ತಾಯಿಯಿಂದ ಛಲದ ಬಳುವಳಿ.. ತಂದೆಯಿಂದ ರಕ್ತದ ಬಳುವಳಿ. ಕ್ಯಾನ್ಸರ್ ಭಾಸ್ಕರನನ್ನು ಹಿಸುಕಿ ಹಾಕಿತು. ಬೆರಣಿ ಭಾಸ್ಕರ ಕಟ್ಟಿಗೆಯ ರಾಶಿ ಮೇಲೆ ಮಲಗಿ ತಾನೇ ತಟ್ಟಿದ ಬೆರಣಿಯಿಂದ ಮುಖ ಮುಚ್ಚಿಸಿಕೊಂಡ.

                   ದೀಪಕ್ ಜೈನ್..

ಬೆರಣಿ ತಟ್ಟುವ ಹುಡುಗ ತಾಯಿಯ ಮದುವೆ ಮಾಡಿದ

ರಾಮು ತನ್ನ ವಿಧವೆ ತಾಯಿಯೊಂದಿಗೆ ವಿಧೇಯನಾಗಿ ಬಡತನದ ಜೊತೆಗೆ ಬದುಕ ಕಟ್ಟುತ್ತಿದ್ದ. ಕಟ್ಟಾ ಸಂಪ್ರದಾಯಸ್ಥರ ಮನೆಗೆ ಗಂಗಮ್ಮನನ್ನು ಮದುವೆ ಮಾಡಿಕೊಡಲಾಗಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ಒಂದು ಸಲ ಊಟ ಮಾಡಿದಾಗ ರಾಶಿ ಬಟ್ಟಲು ತೊಳೆಯಬೇಕಾದಷ್ಟು ತುಂಬಿದ ಸಂಸಾರ, ಹಲವು ಮನೆಗಳು ಸೇರಿ ಒಂದೇ ಮನೆಯಾದಷ್ಟು ದೊಡ್ಡ ಮನೆ, ಊಟ ಬಟ್ಟೆ ಯಾವುದಕ್ಕೂ ಕೊರತೆಯಿಲ್ಲ, ಆಗಲೇ ಹಲವು ಜೀವಗಳಿಗೆ ಉಸಿರಾಗಬೇಕಿದ್ದ ಗಂಡ ಅಪಘಾತದಲ್ಲಿ ಬಾರದ ಲೋಕಕ್ಕೇರಿದ.

ಬಹು ಭಾರದ ಮಗು ಗಂಗಮ್ಮನ ಹೆಗಲೇರಿತು. ಮನಸ್ಸು ಹೊರಲಾರದಷ್ಟು ಭಾರವಾಯ್ತು. ದೇಹ ಸಹಿಸಲಾರದಷ್ಟು ಹಗುರವಾಯ್ತು. ಹೆಣ್ಣಿನ ಬದುಕಿಗೆ ತೂಕ ತುಂಬುವ ಮಾಂಗಲ್ಯ ಸೂತ್ರ, ಮೂಗುತ್ತಿ, ಹಣೆಯ ತಿಲಕ, ಕೈ ಬಳೆ, ಕಿವಿಯೋಲೆ, ಕಾಲ್ಗೆಜ್ಜೆ, ಕಾಲುಂಗುರಗಳಾದ ಒಡವೆಗಳು ತನ್ನ ಒಡಲಿಂದ ಬೇರ್ಪಟ್ಟಿತು. ಗಂಡನೊಡಲ ಬಡಿತವಿಲ್ಲದ ಎದೆಯನ್ನೇರಿತು. ಗಂಗಮ್ಮನ ದೇಹ ಸಹಿಸಲಾರದಷ್ಟು ಹಗುರಾಯ್ತು.

ಸಂಪ್ರದಾಯದ ಮನೆಯವರಾದ ಗಂಡನ ಮನೆಯವರು ದೂರಲಾರಂಬಿಸಿದರು. ಇವಳು ಕಾಲಿಟ್ಟ ಘಳಿಗೆ ಸರಿ ಇಲ್ಲ. ಮಗನನ್ನು ಕಳೆದುಕೊಂಡಾಯ್ತು. ಇನ್ನು ಇವಳ್ಯಾಕೆ ಮನೆಯಲ್ಲಿ ಎಂದು ಮನೆಯಿಂದ ಆಚೆ ಹಾಕಿದರು. ಏನು ಮಾಡಲಿ ಗೆಳೆತನಕ್ಕೆ ಸಮುದ್ರ ರಾಜನೇ ಇದ್ದರೂ ಉಪ್ಪಿಗೆ ಬಡತನ ಎಂಬಂತಾಯ್ತು ಗಂಗಮ್ಮನ ಸ್ಥಿತಿ. ಗಂಗಮ್ಮನ  ಕೈಯಲ್ಲಿ ಕಾಸಿಲ್ಲ ನೆಲೆಗೊಂದು ಸೂರಿಲ್ಲ ಆಗಿನ್ನೂ ಜಗತ್ತಿಗೆ ಕಾಲಿಡುತ್ತಿರುವ ಪುಟ್ಟ ಮಗುವಿಗೆ ಗತಿ ಇಲ್ಲ. ಗಂಡ ತೀರಿಕೊಂಡಾಗ ಅವಳಿಗೆ ಜೀವನೋಪಾಯಕ್ಕಿದ್ದುದು ತವರು ಮನೆಯಲ್ಲಿ ಕೊಟ್ಟ ಒಂದು ಹಸು-ಕರು ಮಾತ್ರ. ದಿನ ಕೂಲಿ ಕೆಲಸಕ್ಕೆಂದು ತಟ್ಟಿದ ಪ್ರತಿ ಬಾಗಿಲೂ ತೆರೆದು ಡಬ್ಬನೇ ಮುಚ್ಚುತ್ತಿದ್ದವು, ವಿಧವೆ ಎಂಬ ಒಂದೇ ಕಾರಣಕ್ಕೆ.
           
ಬಯಸದಿರು ಮನುಜ ಬಡತನವ. ಹಾಗೂ ಹೀಗೂ ಬಾಲ್ಯದಲ್ಲಿ ಕಲಿತಿದ್ದ ಬೆರಣಿ ತಟ್ಟುವ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ನಿರ್ಧಾರ ಮಾಡುತ್ತಾಳೆ. ಮೂರು ಹೊತ್ತೂ ಹೊಟ್ಟೆಯ ಬೆಂಕಿ ತಣಿಸಲು ಪ್ರತಿ ಬಡವರ ಮನೆಯ ಒಲೆಯಲ್ಲಿ ಉರಿವ ಬೆಂಕಿಗೆ ಬೇಕಾದಷ್ಟು ತಟ್ಟಿದಳು ಬೆರಣಿ. ರಾತ್ರಿ ಬೇಗ ಉಂಡು ಮಲಗುವುದು. ಬೆಳಗ್ಗೆ ಬೇಗನೇ ಎದ್ದು ಊರ ಯಜಮಾನರ ಮನೆಯ ಹಟ್ಟಿ ತೊಳೆದು ಹಾಲು ಕರೆದು ಅಲ್ಲಿಂದಲೇ ಸೆಗಣಿ ತಂದು ತಟ್ಟುತ ಬೆಳಗ್ಗಿನ ಊಟವನ್ನು ಮಧ್ಯಾಹ್ನಕ್ಕೆ ಮುಂದೂಡಿ ದಿನಕ್ಕೊಂದು ಹೊತ್ತಿನ ಊಟ ಉಳಿಸಿ ಮಗನನ್ನು ತನ್ನ ತೊಡೆ ಮೇಲೆ ಮಲಗಿಸಿ ಹಸಿವ ಕಟ್ಟಿ ಬದುಕ ಕಟ್ಟುವ ಕಥೆ ಹೇಳುತ್ತಿದ್ದಳು.

         ಅಮ್ಮ ಹೇಳುವ ಕಥೆಗಳಲ್ಲಿ ಅಪ್ಪಿತಪ್ಪಿ ಊಟ-ತಿಂಡಿ, ಹಾಲು-ಮೊಸರು ಅಂದಾಗ ರಾಮುವಿನ ಒಣಗಿದ ನಾಲಿಗೆ ಚಿಗುರುತ್ತಿತ್ತು, ಅದು ಕಥೆಯೆಂದು ಅರಿವಾದಾಗ ತುಂಡು ಅರಿವೆ ಇಲ್ಲದ ದೇಹ ಶಬ್ಧ ಮಾಡದೇ ಚೀರುತ್ತಿತ್ತು .

           ರಾಮು ಬೆಳೆದು ದೊಡ್ಡವನಾಗಿದ್ದಾನೆ, ಶಾಲೆಗೆ ಹೋದರೆ ಉಣ್ಣಲು ಇಲ್ಲ ಎಂಬುದು ಅರ್ಥವಾಗಿ ರಾಮು ಶಾಲೆಗೆ ಹೋಗುವ ಮಕ್ಕಳನ್ನು ನೋಡುತ್ತಿರಲಿಲ್ಲ ಬದಲಾಗಿ ಶಾಲೆಯಿಂದ ಮರಳಿ ಮನೆಗೆ ಹೋಗುವ ಮಕ್ಕಳನ್ನು ನೋಡುತ್ತಿದ್ದ. ಅವರ ಹೆಗಲ ಮೇಲೆ ಪುಸ್ತಕದ ಚೀಲ ಇದ್ದರೆ, ಈತನ ಹೆಗಲಿಗಿಂತ ಸ್ವಲ್ಪ ಎತ್ತರದಲ್ಲಿರುವ ತಲೆಯ ಮೇಲೆ ತನ್ನ ದೇಹದ ಭಾರಕ್ಕಿಂತ ಸ್ವಲ್ಪ ಹೆಚ್ಚಿನ ಭಾರದ ಸೆಗಣಿ ತುಂಬಿದ ಚೀಲ ಇರುತ್ತಿತ್ತು. ತಂದ ಹಸಿ ಸೆಗಣಿಯನ್ನು ತನ್ನೆರಡು ಅಂಗೈ ಮಧ್ಯೆ ಮುದ್ದೆ ಆಗುವಂತೆ ಹದಮಾಡಿ ಬೆರಣಿ ತಟ್ಟಿ ಎರಡೂ ಬದಿ ಒಣಗಿಸಿ ಅದನ್ನ ಮಾರಿಕೊಂಡು ಬದುಕು ಸಾಗಿಸುತ್ತಿದ್ದರು. ಅದೇನೋ ಬಡತನ ರಾಮುವಿಗೆ ಎಲ್ಲಾ ಕಲಿಸಿತ್ತು. ಶ್ರೀಮಂತನಾಗುವುದೊಂದನ್ನು ಬಿಟ್ಟು.

           ಅಮ್ಮನ ಒಡಲು ಬಡವಾಗಿದೆ. ಒಡಲ  ಮುತ್ತೈದೆ ದೇವರಲ್ಲಿ ಅಡವಾಗಿದೆ, ಬಿಡಿಸಿ ತರದೆ ತಡವಾಗಿ. ನನ್ನಮ್ಮನ ಒಡಲಿಗೆ, ಒಡವೆಗೆ ಒಡೆಯನ ಕೊಡು ದೇವ. ಒಡೆಯನ ಒಪ್ಪುವ ಮನಸ್ಸು ಅಮ್ಮನದಾಗಿಸು ದೇವ.

ಅಮ್ಮನ ಬಳಿ ಬಂದ ಬಿಗಿದಪ್ಪಿದ. ಅಮ್ಮನ ಹೆಗಲ ಮೇಲೆ ತನ್ನ ಗಲ್ಲವನ್ನಿಟ್ಟ. ಅಮ್ಮನನ್ನು ಮದುವೆಗೆ ಒಪ್ಪಿಸಲು ಏನೆಲ್ಲಾ ಮಾತಾಡಬೇಕೆಂದುಕೊಂಡಿದ್ದಾನೋ ಮಾತುಗಳೆಲ್ಲ ಏನು ಮಾಡಿದರೂ ನೆನಪಿಗೆ ಬರದೆ ಮೂಗನಾದ.
             
ಕಣ್ಣುಗಳಿಂದ ಇಳಿದ ನೀರು ಮೂಗಿನ ಪಕ್ಕದಲ್ಲೇ ಹರಿದು ತನ್ನ ಮೀಸೆಯನ್ನೂ ದಾಟಿ ಅಮ್ಮನ ಬೆನ್ನಮೇಲೆ ಬಿದ್ದವು. ತಕ್ಷಣ ಅಮ್ಮ ಮಗನಪ್ಪುಗೆಯಿಂದ ಸಡಿಲಾದಳು. ಹರಿವ ಮಗನ ಕಣ್ಣೀರಿಗೆ ಬೆರಳನ್ನಡ್ಡ ಇಟ್ಟಳು. ಮಗ ಅಮ್ಮನ ಬರಿದಾದ ಹಣೆಗೆ ಮುತ್ತನ್ನಿಟ್ಟ.

ಅಮ್ಮನಲ್ಲವೆ ಮಗನ ದುಃಖ ತನ್ನ ಕುರಿತಾದದ್ದು ಎಂದು ಅರಿತಾಗಿತ್ತು. ಮತ್ತೆ ಅದೇ ಕಥೆ ಹೇಳುವ ಹಾಗೆ ತಾನು ಕೂತು ಮಗನ ತಲೆಯನ್ನು ತನ್ನ ತೊಡೆಯಲ್ಲಿರಿಸಿ ತಲೆ ಕೂದಲನ್ನು ನೇವರಿಸುತ್ತಾನೋಡು ಮಗ ಒಂದು ಜೀವ ತನ್ನ ಜೀವವನ್ನು ಇನ್ನೊಂದು ಜೀವಕ್ಕೆ ಒಪ್ಪಿಸುವುದು ಅಷ್ಟು ಸುಲಭದ ಮಾತಲ್ಲ. ನಿನ್ನ ಬೇಡಿಕೆಯಂತೆ ನಾನು ನನ್ನನ್ನು ಯಾವ ಸುಖಕ್ಕಾಗಿ ಪರ ಜೀವಕ್ಕೆ ಒಪ್ಪಿಸಲಿ ಹೇಳು ಕಂದಾ. ನನ್ನ ಪಾತಿವ್ರತ್ಯ ಅದು ನಿನ್ನ ಅಪ್ಪನ ಸ್ವತ್ತು. ಈಗ ಅವರಿಲ್ಲದ ಲೋಕದಲ್ಲಿ ನಾನು ನನ್ನ ಸುಖಕ್ಕಾಗಿ ಅಡ ಇಡಲೇಕೆ....?”

“ಅಮ್ಮಾ, ನಾವಿಬ್ಬರು ಒಂದೇ ಮನೆಯಲ್ಲಿ ಬದುಕುತ್ತಿದ್ದೇವೆಯಾದರೂ ನಾನು ಒಂಟಿ ನೀನು ಒಂಟಿ. ಅಮ್ಮ ನನಗೂ ಒಂದು ತಂಗಿ ಇರುತ್ತಿದ್ದರೆ, ತಮ್ಮ ಇರುತ್ತಿದ್ದರೆ..... ನನ್ನ ದುಡಿಮೆಯ ಉತ್ಸಾಹ ಮತ್ತು ಸಂಪಾದನೆ ಎರಡೂ ಹೆಚ್ಚಾಗುತ್ತಿತ್ತು. ನೀನು ನಿನ್ನ ಸುಖಕ್ಕಾಗಿ ನಿನ್ನ ಪಾತಿವ್ರತೆಯನ್ನು ಅಡ ಇಡು ಎಂದು ಕೇಳುತ್ತಿಲ್ಲ ನಾನು. ಅದಕ್ಕಿಂತಲೂ ಮಿಗಿಲಾಗಿ ತೆಗೆದಿಟ್ಟ ಪಾತಿವ್ರತೆಯನ್ನು ತೊಡು. ಕಟ್ಟಿಟ್ಟ ಕನಸನ್ನು ಹರಿಯಬಿಡು. ಗೊತ್ತಮ್ಮ ನನಗೆ ಎಲ್ಲಿ ನನ್ನ ಬದುಕಿಗೆ ಅನ್ಯಾಯ ಆಗುತ್ತೇನೋ ಎಂದು ನಿನ್ನ ಬದುಕಿಗೆ ಆಗುತ್ತಿರುವ ಅನ್ಯಾಯವನ್ನು ಅನುಭವಿಸುತ್ತಾ ಬದುಕಿರುವೆ.
ಕಂಡಿದ್ದೇನೆ ನಮ್ಮ ನೆರೆಮನೆಯ ದಂಪತಿಗಳೆಲ್ಲಾ ಒಟ್ಟಾಗಿ ಹೊರಟಾಗ ಅವರ ಕಣ್ಣಿಗೆ ನೀ ಬೀಳಬಾರದೆಂದು ಓಡಿ ಬಂದು ಮನೆಯೊಳಗೆ ಸೇರುತ್ತಿದ್ದೆ. ಏನಾಯ್ತೆಂದು ಭಯದಿಂದ ಓಡಿ ಬಂದು ನೋಡಿದಾಗ ಕನ್ನಡಿ ಹಿಡ್ಕೊಂಡು ಅಳುತ್ತಿದ್ದೆ. ಪರರು ನೋಡಬಾರದ ನಿನ್ನ ಮುಖವನ್ನು ನೀನೇ ನೋಡುತ್ತಿದ್ದೆ. ಅಮ್ಮಾ, ಇಗೋ ಕೇಳು ನಿನ್ನ ಮಗನಾದ ನಾನು ಮುಂದೊಂದು ದಿನ ಮದುವೆ ಎಂದು ಆಗುವುದಿದ್ದರೆ ಅದು ನಿನ್ನಂಥ ವಿಧವೆಯನ್ನೇ.
ಬತ್ತಿ ಹೋದ ಕೆರೆ ನೀನು ತುಂಬಿ ಹರಿಬೇಕಾಗಿದೆಯಮ್ಮ. ತುಂಬುವ ಸಾಮರ್ಥ್ಯ ನಿನ್ನಲ್ಲಿದೆ. ತುಂಬಿಸುವ ಸಾಮರ್ಥ್ಯ ನನ್ನಲ್ಲಿದೆ, ಮಳೆಯ ತರಲು ಹೊರಟದ್ದೇನೆ ಬರಗಾಲದ ನಮ್ಮ ಬದುಕಿಗೆ. ಮುಚ್ಚಿಡಬೇಡ, ನಿನ್ನ ತುಂಬುವ ಭಾವವನ್ನು ತೆರೆದಿಡು ಅದು ಮುಂದೊಂದು ದಿನ ಬರಲಿರುವ ನಿನ್ನ ಸೊಸೆಗೆ ಮಾದರಿಯಾಗಲಿ.”

           ಕಣ್ಣೀರ ಇಳಿದ ಮುಖವನ್ನು ತಣ್ಣೀರಲ್ಲಿ ತೊಳೆದಳು. ಮಗನ ಬಳಿ ಬಂದಳು ಮತ್ತೆ ಮಗನನ್ನು ಬಿಗಿದಪ್ಪಿದಳು. ಅಮ್ಮ ಉಸಿರಾಡಿದಳು ಮಗ ಉಸಿರನ್ನಾಲಿಸಿದ. ಅಮ್ಮನ ಒಪ್ಪಿಗೆಯುಸಿರು ಮಗನ ಕಿವಿಯನ್ನು ಮುಟ್ಟಿತು. ಮಗನೂ ಅಮ್ಮನ ಉಸಿರೊಡನೆ ಹೆಮ್ಮೆಯಿಂದ ಉಸಿರಾಡಿದನು. ಅಮ್ಮನಿಗೆ ಗೋಡೆಯಲ್ಲಿ ನೇತಾಡುತ್ತಿದ್ದ ಕನ್ನಡಿ ಕಂಡಿತು. ಕನ್ನಡಿಯಲ್ಲೊಂದು ನಗು ಮುಖದ ಗಂಡಸಿನ ಮುಖ ಕಂಡಿತು. ಪ್ರಶ್ನಾರ್ಥವಾಗಿ ಮಗನ ಮುಖ ನೋಡಿದಳು. ಮಗ ಹೌದು ಎಂದ.

ಮನೆಯ ಪಕ್ಕದಲ್ಲಿರುವ ಶಾಲೆಯ ಜಗಲಿಯ ಕಂಬಕ್ಕೆ ಕಟ್ಟಿದ ಗಂಟೆಗೆ ನಿಗದಿತ ಸಮಯದಲ್ಲಿ ಬಂದು ತನ್ನ ಕೈಯಲ್ಲಿರುವ ಕಬ್ಬಿಣದ ಸರಳಿದ ಬಾರಿಸುತ್ತಿದ್ದ ಶಂಕ್ರಣ್ಣಗೆ ನಲವತ್ತು ದಾಟಿದರೂ ಹೆಣ್ಣು ಸಿಗದೆ ಇನ್ನೂ ಕುಮಾರನಾಗಿಯೇ ಉಳಿದಿದ್ದ. ಇಂದು ತನ್ನ ಬದುಕಿನ ಗಂಟೆ ಬಾರಿಸುವ ಸಮಯ ಬಂದಿದೆ. ತನ್ನ ಮಾತಿನಂತೆ ಅರ್ಧಗಂಟೆ ಮೊದಲೇ ಬಂದಿದ್ದನ್ನು ಕಂಡ ರಾಮು ಶಂಕರಣ್ಣನನ್ನು ಹೆಮ್ಮೆಯಿಂದ ಬರಮಾಡಿಕೊಂಡ.

           ಕಥೆ ಮಾತಾಯ್ತು. ಮಾತೆ ಒಪ್ಪಿದ್ದಾಯ್ತು. ಗಂಟೆ ಬಾರಿಸುವಾತ ತನ್ನಮ್ಮನ ಹಣೆಗೆ ಬೊಟ್ಟನಿಟ್ಟ. ಬೊಟ್ಟಿನ ಮೇಲೊಂದು ಮುತ್ತನ್ನಿಟ್ಟ.

- ಸವಿತಾ ಗುರುಪ್ರಸಾದ್.