ರಾಮು ತನ್ನ ವಿಧವೆ ತಾಯಿಯೊಂದಿಗೆ ವಿಧೇಯನಾಗಿ ಬಡತನದ ಜೊತೆಗೆ ಬದುಕ ಕಟ್ಟುತ್ತಿದ್ದ. ಕಟ್ಟಾ ಸಂಪ್ರದಾಯಸ್ಥರ ಮನೆಗೆ ಗಂಗಮ್ಮನನ್ನು ಮದುವೆ ಮಾಡಿಕೊಡಲಾಗಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ಒಂದು ಸಲ ಊಟ ಮಾಡಿದಾಗ ರಾಶಿ ಬಟ್ಟಲು ತೊಳೆಯಬೇಕಾದಷ್ಟು ತುಂಬಿದ ಸಂಸಾರ, ಹಲವು ಮನೆಗಳು ಸೇರಿ ಒಂದೇ ಮನೆಯಾದಷ್ಟು ದೊಡ್ಡ ಮನೆ, ಊಟ ಬಟ್ಟೆ ಯಾವುದಕ್ಕೂ ಕೊರತೆಯಿಲ್ಲ, ಆಗಲೇ ಹಲವು ಜೀವಗಳಿಗೆ ಉಸಿರಾಗಬೇಕಿದ್ದ ಗಂಡ ಅಪಘಾತದಲ್ಲಿ ಬಾರದ ಲೋಕಕ್ಕೇರಿದ.
ಬಹು ಭಾರದ ಮಗು ಗಂಗಮ್ಮನ ಹೆಗಲೇರಿತು. ಮನಸ್ಸು ಹೊರಲಾರದಷ್ಟು ಭಾರವಾಯ್ತು. ದೇಹ ಸಹಿಸಲಾರದಷ್ಟು ಹಗುರವಾಯ್ತು. ಹೆಣ್ಣಿನ ಬದುಕಿಗೆ ತೂಕ ತುಂಬುವ ಮಾಂಗಲ್ಯ ಸೂತ್ರ, ಮೂಗುತ್ತಿ, ಹಣೆಯ ತಿಲಕ, ಕೈ ಬಳೆ, ಕಿವಿಯೋಲೆ, ಕಾಲ್ಗೆಜ್ಜೆ, ಕಾಲುಂಗುರಗಳಾದ ಒಡವೆಗಳು ತನ್ನ ಒಡಲಿಂದ ಬೇರ್ಪಟ್ಟಿತು. ಗಂಡನೊಡಲ ಬಡಿತವಿಲ್ಲದ ಎದೆಯನ್ನೇರಿತು. ಗಂಗಮ್ಮನ ದೇಹ ಸಹಿಸಲಾರದಷ್ಟು ಹಗುರಾಯ್ತು.
ಸಂಪ್ರದಾಯದ ಮನೆಯವರಾದ ಗಂಡನ ಮನೆಯವರು ದೂರಲಾರಂಬಿಸಿದರು. ಇವಳು ಕಾಲಿಟ್ಟ ಘಳಿಗೆ ಸರಿ ಇಲ್ಲ. ಮಗನನ್ನು ಕಳೆದುಕೊಂಡಾಯ್ತು. ಇನ್ನು ಇವಳ್ಯಾಕೆ ಈ ಮನೆಯಲ್ಲಿ ಎಂದು ಮನೆಯಿಂದ ಆಚೆ ಹಾಕಿದರು. ಏನು ಮಾಡಲಿ ಗೆಳೆತನಕ್ಕೆ ಸಮುದ್ರ ರಾಜನೇ ಇದ್ದರೂ ಉಪ್ಪಿಗೆ ಬಡತನ ಎಂಬಂತಾಯ್ತು ಗಂಗಮ್ಮನ ಸ್ಥಿತಿ. ಗಂಗಮ್ಮನ ಕೈಯಲ್ಲಿ ಕಾಸಿಲ್ಲ ನೆಲೆಗೊಂದು ಸೂರಿಲ್ಲ ಆಗಿನ್ನೂ ಜಗತ್ತಿಗೆ ಕಾಲಿಡುತ್ತಿರುವ ಪುಟ್ಟ ಮಗುವಿಗೆ ಗತಿ ಇಲ್ಲ. ಗಂಡ ತೀರಿಕೊಂಡಾಗ ಅವಳಿಗೆ ಜೀವನೋಪಾಯಕ್ಕಿದ್ದುದು ತವರು ಮನೆಯಲ್ಲಿ ಕೊಟ್ಟ ಒಂದು ಹಸು-ಕರು ಮಾತ್ರ. ದಿನ ಕೂಲಿ ಕೆಲಸಕ್ಕೆಂದು ತಟ್ಟಿದ ಪ್ರತಿ ಬಾಗಿಲೂ ತೆರೆದು ಡಬ್ಬನೇ ಮುಚ್ಚುತ್ತಿದ್ದವು, ವಿಧವೆ ಎಂಬ ಒಂದೇ ಕಾರಣಕ್ಕೆ.
ಬಯಸದಿರು ಮನುಜ ಈ ಬಡತನವ. ಹಾಗೂ ಹೀಗೂ ಬಾಲ್ಯದಲ್ಲಿ ಕಲಿತಿದ್ದ ಬೆರಣಿ ತಟ್ಟುವ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ನಿರ್ಧಾರ ಮಾಡುತ್ತಾಳೆ. ಮೂರು ಹೊತ್ತೂ ಹೊಟ್ಟೆಯ ಬೆಂಕಿ ತಣಿಸಲು ಪ್ರತಿ ಬಡವರ ಮನೆಯ ಒಲೆಯಲ್ಲಿ ಉರಿವ ಬೆಂಕಿಗೆ ಬೇಕಾದಷ್ಟು ತಟ್ಟಿದಳು ಬೆರಣಿ. ರಾತ್ರಿ ಬೇಗ ಉಂಡು ಮಲಗುವುದು. ಬೆಳಗ್ಗೆ ಬೇಗನೇ ಎದ್ದು ಊರ ಯಜಮಾನರ ಮನೆಯ ಹಟ್ಟಿ ತೊಳೆದು ಹಾಲು ಕರೆದು ಅಲ್ಲಿಂದಲೇ ಸೆಗಣಿ ತಂದು ತಟ್ಟುತ ಬೆಳಗ್ಗಿನ ಊಟವನ್ನು ಮಧ್ಯಾಹ್ನಕ್ಕೆ ಮುಂದೂಡಿ ದಿನಕ್ಕೊಂದು ಹೊತ್ತಿನ ಊಟ ಉಳಿಸಿ ಮಗನನ್ನು ತನ್ನ ತೊಡೆ ಮೇಲೆ ಮಲಗಿಸಿ ಹಸಿವ ಕಟ್ಟಿ ಬದುಕ ಕಟ್ಟುವ ಕಥೆ ಹೇಳುತ್ತಿದ್ದಳು.
ಅಮ್ಮ ಹೇಳುವ ಕಥೆಗಳಲ್ಲಿ ಅಪ್ಪಿತಪ್ಪಿ ಊಟ-ತಿಂಡಿ, ಹಾಲು-ಮೊಸರು ಅಂದಾಗ ರಾಮುವಿನ ಒಣಗಿದ ನಾಲಿಗೆ ಚಿಗುರುತ್ತಿತ್ತು, ಅದು ಕಥೆಯೆಂದು ಅರಿವಾದಾಗ ತುಂಡು ಅರಿವೆ ಇಲ್ಲದ ದೇಹ ಶಬ್ಧ ಮಾಡದೇ ಚೀರುತ್ತಿತ್ತು .
ರಾಮು ಬೆಳೆದು ದೊಡ್ಡವನಾಗಿದ್ದಾನೆ, ಶಾಲೆಗೆ ಹೋದರೆ ಉಣ್ಣಲು ಇಲ್ಲ ಎಂಬುದು ಅರ್ಥವಾಗಿ ರಾಮು ಶಾಲೆಗೆ ಹೋಗುವ ಮಕ್ಕಳನ್ನು ನೋಡುತ್ತಿರಲಿಲ್ಲ ಬದಲಾಗಿ ಶಾಲೆಯಿಂದ ಮರಳಿ ಮನೆಗೆ ಹೋಗುವ ಮಕ್ಕಳನ್ನು ನೋಡುತ್ತಿದ್ದ. ಅವರ ಹೆಗಲ ಮೇಲೆ ಪುಸ್ತಕದ ಚೀಲ ಇದ್ದರೆ, ಈತನ ಹೆಗಲಿಗಿಂತ ಸ್ವಲ್ಪ ಎತ್ತರದಲ್ಲಿರುವ ತಲೆಯ ಮೇಲೆ ತನ್ನ ದೇಹದ ಭಾರಕ್ಕಿಂತ ಸ್ವಲ್ಪ ಹೆಚ್ಚಿನ ಭಾರದ ಸೆಗಣಿ ತುಂಬಿದ ಚೀಲ ಇರುತ್ತಿತ್ತು. ತಂದ ಹಸಿ ಸೆಗಣಿಯನ್ನು ತನ್ನೆರಡು ಅಂಗೈ ಮಧ್ಯೆ ಮುದ್ದೆ ಆಗುವಂತೆ ಹದಮಾಡಿ ಬೆರಣಿ ತಟ್ಟಿ ಎರಡೂ ಬದಿ ಒಣಗಿಸಿ ಅದನ್ನ ಮಾರಿಕೊಂಡು ಬದುಕು ಸಾಗಿಸುತ್ತಿದ್ದರು. ಅದೇನೋ ಬಡತನ ರಾಮುವಿಗೆ ಎಲ್ಲಾ ಕಲಿಸಿತ್ತು. ಶ್ರೀಮಂತನಾಗುವುದೊಂದನ್ನು ಬಿಟ್ಟು.
ಅಮ್ಮನ ಒಡಲು ಬಡವಾಗಿದೆ. ಒಡಲ ಮುತ್ತೈದೆ ದೇವರಲ್ಲಿ ಅಡವಾಗಿದೆ, ಬಿಡಿಸಿ ತರದೆ ತಡವಾಗಿ. ನನ್ನಮ್ಮನ ಒಡಲಿಗೆ, ಒಡವೆಗೆ ಒಡೆಯನ ಕೊಡು ದೇವ. ಆ ಒಡೆಯನ ಒಪ್ಪುವ ಮನಸ್ಸು ಅಮ್ಮನದಾಗಿಸು ದೇವ.
ಅಮ್ಮನ ಬಳಿ ಬಂದ ಬಿಗಿದಪ್ಪಿದ. ಅಮ್ಮನ ಹೆಗಲ ಮೇಲೆ ತನ್ನ ಗಲ್ಲವನ್ನಿಟ್ಟ. ಅಮ್ಮನನ್ನು ಮದುವೆಗೆ ಒಪ್ಪಿಸಲು ಏನೆಲ್ಲಾ ಮಾತಾಡಬೇಕೆಂದುಕೊಂಡಿದ್ದಾನೋ ಆ ಮಾತುಗಳೆಲ್ಲ ಏನು ಮಾಡಿದರೂ ನೆನಪಿಗೆ ಬರದೆ ಮೂಗನಾದ.
ಕಣ್ಣುಗಳಿಂದ ಇಳಿದ ನೀರು ಮೂಗಿನ ಪಕ್ಕದಲ್ಲೇ ಹರಿದು ತನ್ನ ಮೀಸೆಯನ್ನೂ ದಾಟಿ ಅಮ್ಮನ ಬೆನ್ನಮೇಲೆ ಬಿದ್ದವು. ತಕ್ಷಣ ಅಮ್ಮ ಮಗನಪ್ಪುಗೆಯಿಂದ ಸಡಿಲಾದಳು. ಹರಿವ ಮಗನ ಕಣ್ಣೀರಿಗೆ ಬೆರಳನ್ನಡ್ಡ ಇಟ್ಟಳು. ಮಗ ಅಮ್ಮನ ಬರಿದಾದ ಹಣೆಗೆ ಮುತ್ತನ್ನಿಟ್ಟ.
ಅಮ್ಮನಲ್ಲವೆ ಮಗನ ದುಃಖ ತನ್ನ ಕುರಿತಾದದ್ದು ಎಂದು ಅರಿತಾಗಿತ್ತು. ಮತ್ತೆ ಅದೇ ಕಥೆ ಹೇಳುವ ಹಾಗೆ ತಾನು ಕೂತು ಮಗನ ತಲೆಯನ್ನು ತನ್ನ ತೊಡೆಯಲ್ಲಿರಿಸಿ ತಲೆ ಕೂದಲನ್ನು ನೇವರಿಸುತ್ತಾ “ನೋಡು ಮಗ ಒಂದು ಜೀವ ತನ್ನ ಜೀವವನ್ನು ಇನ್ನೊಂದು ಜೀವಕ್ಕೆ ಒಪ್ಪಿಸುವುದು ಅಷ್ಟು ಸುಲಭದ ಮಾತಲ್ಲ. ನಿನ್ನ ಬೇಡಿಕೆಯಂತೆ ನಾನು ನನ್ನನ್ನು ಯಾವ ಸುಖಕ್ಕಾಗಿ ಪರ ಜೀವಕ್ಕೆ ಒಪ್ಪಿಸಲಿ ಹೇಳು ಕಂದಾ. ನನ್ನ ಪಾತಿವ್ರತ್ಯ ಅದು ನಿನ್ನ ಅಪ್ಪನ ಸ್ವತ್ತು. ಈಗ ಅವರಿಲ್ಲದ ಈ ಲೋಕದಲ್ಲಿ ನಾನು ನನ್ನ ಸುಖಕ್ಕಾಗಿ ಅಡ ಇಡಲೇಕೆ....?”
“ಅಮ್ಮಾ, ನಾವಿಬ್ಬರು ಒಂದೇ ಮನೆಯಲ್ಲಿ ಬದುಕುತ್ತಿದ್ದೇವೆಯಾದರೂ ನಾನು ಒಂಟಿ ನೀನು ಒಂಟಿ. ಅಮ್ಮ ನನಗೂ ಒಂದು ತಂಗಿ ಇರುತ್ತಿದ್ದರೆ, ತಮ್ಮ ಇರುತ್ತಿದ್ದರೆ..... ನನ್ನ ದುಡಿಮೆಯ ಉತ್ಸಾಹ ಮತ್ತು ಸಂಪಾದನೆ ಎರಡೂ ಹೆಚ್ಚಾಗುತ್ತಿತ್ತು. ನೀನು ನಿನ್ನ ಸುಖಕ್ಕಾಗಿ ನಿನ್ನ ಪಾತಿವ್ರತೆಯನ್ನು ಅಡ ಇಡು ಎಂದು ಕೇಳುತ್ತಿಲ್ಲ ನಾನು. ಅದಕ್ಕಿಂತಲೂ ಮಿಗಿಲಾಗಿ ತೆಗೆದಿಟ್ಟ ಪಾತಿವ್ರತೆಯನ್ನು ತೊಡು. ಕಟ್ಟಿಟ್ಟ ಕನಸನ್ನು ಹರಿಯಬಿಡು. ಗೊತ್ತಮ್ಮ ನನಗೆ ಎಲ್ಲಿ ನನ್ನ ಬದುಕಿಗೆ ಅನ್ಯಾಯ ಆಗುತ್ತೇನೋ ಎಂದು ನಿನ್ನ ಬದುಕಿಗೆ ಆಗುತ್ತಿರುವ ಅನ್ಯಾಯವನ್ನು ಅನುಭವಿಸುತ್ತಾ ಬದುಕಿರುವೆ.
ಕಂಡಿದ್ದೇನೆ ನಮ್ಮ ನೆರೆಮನೆಯ ದಂಪತಿಗಳೆಲ್ಲಾ ಒಟ್ಟಾಗಿ ಹೊರಟಾಗ ಅವರ ಕಣ್ಣಿಗೆ ನೀ ಬೀಳಬಾರದೆಂದು ಓಡಿ ಬಂದು ಮನೆಯೊಳಗೆ ಸೇರುತ್ತಿದ್ದೆ. ಏನಾಯ್ತೆಂದು ಭಯದಿಂದ ಓಡಿ ಬಂದು ನೋಡಿದಾಗ ಕನ್ನಡಿ ಹಿಡ್ಕೊಂಡು ಅಳುತ್ತಿದ್ದೆ. ಪರರು ನೋಡಬಾರದ ನಿನ್ನ ಮುಖವನ್ನು ನೀನೇ ನೋಡುತ್ತಿದ್ದೆ. ಅಮ್ಮಾ, ಇಗೋ ಕೇಳು ನಿನ್ನ ಮಗನಾದ ನಾನು ಮುಂದೊಂದು ದಿನ ಮದುವೆ ಎಂದು ಆಗುವುದಿದ್ದರೆ ಅದು ನಿನ್ನಂಥ ವಿಧವೆಯನ್ನೇ.
ಬತ್ತಿ ಹೋದ ಕೆರೆ ನೀನು ತುಂಬಿ ಹರಿಬೇಕಾಗಿದೆಯಮ್ಮ. ತುಂಬುವ ಸಾಮರ್ಥ್ಯ ನಿನ್ನಲ್ಲಿದೆ. ತುಂಬಿಸುವ ಸಾಮರ್ಥ್ಯ ನನ್ನಲ್ಲಿದೆ, ಮಳೆಯ ತರಲು ಹೊರಟದ್ದೇನೆ ಬರಗಾಲದ ನಮ್ಮ ಬದುಕಿಗೆ. ಮುಚ್ಚಿಡಬೇಡ, ನಿನ್ನ ತುಂಬುವ ಭಾವವನ್ನು ತೆರೆದಿಡು ಅದು ಮುಂದೊಂದು ದಿನ ಬರಲಿರುವ ನಿನ್ನ ಸೊಸೆಗೆ ಮಾದರಿಯಾಗಲಿ.”
ಕಣ್ಣೀರ ಇಳಿದ ಮುಖವನ್ನು ತಣ್ಣೀರಲ್ಲಿ ತೊಳೆದಳು. ಮಗನ ಬಳಿ ಬಂದಳು ಮತ್ತೆ ಮಗನನ್ನು ಬಿಗಿದಪ್ಪಿದಳು. ಅಮ್ಮ ಉಸಿರಾಡಿದಳು ಮಗ ಉಸಿರನ್ನಾಲಿಸಿದ. ಅಮ್ಮನ ಒಪ್ಪಿಗೆಯುಸಿರು ಮಗನ ಕಿವಿಯನ್ನು ಮುಟ್ಟಿತು. ಮಗನೂ ಅಮ್ಮನ ಉಸಿರೊಡನೆ ಹೆಮ್ಮೆಯಿಂದ ಉಸಿರಾಡಿದನು. ಅಮ್ಮನಿಗೆ ಗೋಡೆಯಲ್ಲಿ ನೇತಾಡುತ್ತಿದ್ದ ಕನ್ನಡಿ ಕಂಡಿತು. ಕನ್ನಡಿಯಲ್ಲೊಂದು ನಗು ಮುಖದ ಗಂಡಸಿನ ಮುಖ ಕಂಡಿತು. ಪ್ರಶ್ನಾರ್ಥವಾಗಿ ಮಗನ ಮುಖ ನೋಡಿದಳು. ಮಗ ಹೌದು ಎಂದ.
ಮನೆಯ ಪಕ್ಕದಲ್ಲಿರುವ ಶಾಲೆಯ ಜಗಲಿಯ ಕಂಬಕ್ಕೆ ಕಟ್ಟಿದ ಗಂಟೆಗೆ ನಿಗದಿತ ಸಮಯದಲ್ಲಿ ಬಂದು ತನ್ನ ಕೈಯಲ್ಲಿರುವ ಕಬ್ಬಿಣದ ಸರಳಿದ ಬಾರಿಸುತ್ತಿದ್ದ ಶಂಕ್ರಣ್ಣಗೆ ನಲವತ್ತು ದಾಟಿದರೂ ಹೆಣ್ಣು ಸಿಗದೆ ಇನ್ನೂ ಕುಮಾರನಾಗಿಯೇ ಉಳಿದಿದ್ದ. ಇಂದು ತನ್ನ ಬದುಕಿನ ಗಂಟೆ ಬಾರಿಸುವ ಸಮಯ ಬಂದಿದೆ. ತನ್ನ ಮಾತಿನಂತೆ ಅರ್ಧಗಂಟೆ ಮೊದಲೇ ಬಂದಿದ್ದನ್ನು ಕಂಡ ರಾಮು ಶಂಕರಣ್ಣನನ್ನು ಹೆಮ್ಮೆಯಿಂದ ಬರಮಾಡಿಕೊಂಡ.
ಕಥೆ ಮಾತಾಯ್ತು. ಮಾತೆ ಒಪ್ಪಿದ್ದಾಯ್ತು. ಗಂಟೆ ಬಾರಿಸುವಾತ ತನ್ನಮ್ಮನ ಹಣೆಗೆ ಬೊಟ್ಟನಿಟ್ಟ. ಬೊಟ್ಟಿನ ಮೇಲೊಂದು ಮುತ್ತನ್ನಿಟ್ಟ.
- ಸವಿತಾ ಗುರುಪ್ರಸಾದ್.
ಒಳ್ಳೆಯ ನಿರೂಪಣೆ.
ReplyDelete