Thursday, November 13, 2014

***ಓಹೋಹೋ ಪ್ರೇಮ ಕಾಶ್ಮೀರ......

ಓಹೋಹೋ ಪ್ರೇಮ ಕಾಶ್ಮೀರ
ಎಂದು ಕೋಗಿಲೆ ಕಂಠದಿಂದ ಹಾಡುತ್ತಾ ಆಕೆ ಲಗೇಜ್ ತುಂಬಿಸುತ್ತಾ, ಕಾಶ್ಮೀರದ ತಂಪು ಮಂಜನ್ನು ನೆನೆ ನೆನೆದು ಕ್ಷಣಕ್ಷಣವೂ ಬಿಸಿಯೇರುತ್ತಿದ್ದಳಾಕೆ. ಅವನೂ ಅವಳ ಸಂಭ್ರಮದಲ್ಲಿ ಪಾಲ್ಗೊಂಡ. ತಿಂಗಳಿಗಾಗುವಷ್ಟು ಬಟ್ಟೆ ಬರೆ ಸ್ವೆಟರ್, ಗ್ಲೌಸ್, ಒಂದಿಷ್ಟು ಮೆಡಿಸಿನ್ ಎಲ್ಲಾ ರೆಡಿ ಆಯ್ತು. ಅವರು ನಾಳೆ ಕಾಶ್ಮೀರ, ಮನಾಲಿ ಎಂದು ಜಾಲಿ ಮಾಡಿ, ವಾಪಾಸು ಬರುವಾಗ ಲಾಲಿ ಹಾಡುವ ತಯಾರಿಯಲ್ಲಿದ್ದರು. ಅವಳು ಮಕರಂದ, ಅವನು ಚಂದ್ರಹನಿ - ಮೂನ್ ಎಂಬೀ ಜೋಡಿ ಭುವಿಯೊಳಗಣ ಸ್ವರ್ಗಕ್ಕೆ ಹನಿಮೂನ್ ಹೊರಟಿತ್ತು.

         ಆಕೆಯ ಕನಸು, ಒಮ್ಮೆಯಾದರೂ ಕಾಶ್ಮೀರದ ಕಣಿವೆ ಏರಬೇಕು. ದಿನಾಲೂ ಕನಸಲ್ಲಿ ಕಾಡುವ ಮಂಜು, ಥಂಡಿ, ಬಣ್ಣಬಣ್ಣದ ಹೂಗಳು, ಸ್ಫಟಿಕ ಬಿಳುಪಿನ ನದಿಗಳು ಎಲ್ಲವನ್ನೂ ಬಾಚಿ ತಬ್ಬಿಕ್ಕೊಳ್ಳಬೇಕು ಹೀಗೆ.... ಮದುವೆಗೆ ಹುಡುಗ ಗೊತ್ತಾದಾಗಲೇ ಆಕೆ ಹುಡುಗನಲ್ಲಿ ಇಟ್ಟ ಮೊದಲ ಬೇಡಿಕೆ ಹನಿಮೂನ್ ಬಗ್ಗೆ. ಅದೂ ಕಾಶ್ಮೀರಕ್ಕೆ ಕರ್ಕೊಂಡು ಹೋಗೋದಾದರೆ ಮಾತ್ರ ಮದುವೆ ಎಂದು ಕಂಡೀಷನ್ ಇಟ್ಟು. ಇದೀಗ ಅವಳ ಆಸೆ ಈಡೇರುತ್ತಿದೆತನ್ನ ಮನದಿಂಗಿತದಂತೆ ಮಧುಚಂದ್ರಕೆ ಮನಚಂದ್ರನ ಜೊತೆ ಮಕರಂದ ಹೀರಲು ಹೊರಟ್ಟಿದ್ದಾಳೆ.

         ಮೊದಲು ಆಗ್ರಾ ವೀಕ್ಷಣೆ. ಅಲ್ಲಿವರೆಗೂ ವಿಮಾನದಲ್ಲಿ ಪ್ರಯಾಣ. ನಂತರ ರೈಲು. ನವಜೋಡಿಯ ರೊಮ್ಯಾಂಟಿಕ್ ಹನಿಮೂನ್ ನೋಡಿದ್ರೇ ಯಾರಾದ್ರೂ ಹೊಟ್ಟೆ ಉರ್ಕೋಬೇಕು. ಹಾಗಿತ್ತು. ಕಾಶ್ಮೀರಕ್ಕೆ ಇನ್ನರ್ಧ ಗಂಟೆಯ ಪಯಣ. ಇವಳೀಗಾಗಲೇ ಅರೆ ಜೀವವಾಗಿದ್ದಳು ಖುಷಿಯಲ್ಲಿ. ಮರುಘಳಿಗೆಗೆ ಖುಷಿ ಚಿದ್ರ ಚಿದ್ರವಾಗಿತ್ತು ಕಾಶ್ಮೀರ ಕನಸಿನೊಂದಿಗೆ. ಪಾಕ್ ಭಯೋತ್ಪಾದಕರ ಬಾಂಬ್ ದಾಳಿಗೆ ಕಾಶ್ಮೀರ ಕನಸು ಸಾವಿರ ಹೋಳುಗಳಾಗಿತ್ತು.

         ಚಂದ್ರ ಮಧು ರೈಲಿನಿಂದ ಹೊರ ಸಿಡಿದ್ದಿದ್ದಾರೆ. ದೇಹ ತುಂಬಾ ರಕ್ತ ಚಂದನ. ಆದರೆ ಇಬ್ಬರೂ ಕೈ ಬಿಟ್ಟಿಲ್ಲ. ಮೇಲ್ನೋಡ್ತಾರೆ, ಎರಡು ಸುಂದರ ಪಕ್ಷಿಗಳು ದೂರದ ಕಣಿವೆಯತ್ತ ಸಾಗುತ್ತಿದ್ದವು. ಯಾವ ಹಕ್ಕಿಗಳೋ ಗೊತ್ತಿಲ್ಲ. ರೆಕ್ಕೆ ತುಂಬಾ ಬಣ್ಣದ ಚಿತ್ತಾರ.... ತನ್ನ ರಕ್ತ ಸುರಿಯುತ್ತಿದ್ದ ಹೆಬ್ಬೆರಳಿಂದ ಅವಳ ಕಡು ಕಪ್ಪು ಕಂಗಳ ನಡುವೆ ಬಿಂದಿ ಇಟ್ಟು "ಕ್ಷಮಿಸು ನನ್ನ, ನಿನ್ನ ಪ್ರೇಮ ಕಾಶ್ಮೀರ ಕನಸಿನ ಗೋಪುರವಾಗೇ ಉಳೀತು. ಮುಂದಿನ ಜನ್ಮ ಅಂತ ಇದ್ರೆ ನಾವಿಬ್ರೂ ಹಕ್ಕಿಗಳಾಗಿ ಹುಟ್ಟೋಣ. ನೋಡಲ್ಲಿ ಬಣ್ಣದ ಜೋಡಿನಾ... ಅವರ ಹಾಗೆ.. ನಿನ್ನಾಸೆಯಂತೆ ಸುತ್ತೋಣ. "

         ಹೌದೂರೀ, ನನ್ನ ಕಾಶ್ಮೀರ ನಾನು ನೋಡ್ಲೇ ಬೇಕು. ಒಂದಿಂಚೂ ಬಿಡದೇ ಸುತ್ತಬೇಕು. ಕಣಿವೆ ಏರಿಳಿದು, ಪ್ರತೀ ಹೂವನ್ನೂ ಮುಟ್ಟಿ, ಅದರ ಬಣ್ಣಕ್ಕೊಂದು ಮುತ್ತು ಕೊಟ್ಟು, ಅಮೃತ ಜಲ ಕುಡಿದು, ಮಂಜಿನಲಿ ಹೊರಳಾಡ್ಬೇಕು. ಎಲ್ಲಾ ಎಲ್ಲಾ ಮಾಡ್ಬೇಕು. ಜನ್ಮದಲ್ಲಿ ಕನಸಿನ ಹಕ್ಕಿ ರೆಕ್ಕೆ ಮುರಿದು ಸತ್ತಿದೆ. ಮುಂದಿನ ಜನ್ಮಕ್ಕಾದರೂ ಸತ್ತ ಹಕ್ಕಿಗೆ ಮತ್ತೆ ರೆಕ್ಕೆ ಮೂಡಲಿ, ಬರೀ ಕಾಶ್ಮೀರ ಅಷ್ಟೇ ಅಲ್ಲಾರೀ, ಇಡಿಯ ಪ್ರಪಂಚ ನೋಡೋಣ್ವಂತೆ. ಲವ್ ಯು ರೀ...
ಮಕರಂದ ಆರಿ ಹೋದಳು.
ಚಂದ್ರ ಕರಗಿ ಹೋದ.

         ಪ್ರೇಮ ಪಕ್ಷಿಗಳ ಕೂಗು ದೇವರವರೆಗೂ ತಲುಪಿದೆ. ಇದೀಗ ಅವರು ಕಾಶ್ಮೀರವಿಡೀ ಬಣ್ಣದ ರೆಕ್ಕೆ ಬಡಿಯುತ್ತಾ ಚಿಂವ್ ಗುಟ್ಟುವ ಹೆಸರೇ ಇಲ್ಲದ ಹಕ್ಕಿಗಳು. ಅವಳ ಆಸೆ ಈಡೇರಿದೆ.
ಓಹೋಹೋ ಪ್ರೇಮ ಕಾಶ್ಮೀರ
ನಮ್ಮ ಪ್ರೇಮ ಅಮರ
ಚಿವ್ ಚಿವ್ ಚಿವ್ ಚಿವ್
ಲವ್ ಯು ಡಾರ್ಲಿಂಗ್...


         ಪದ್ಮಿನಿ ಜೈನ್ ಎಸ್


1 comment:

  1. ಕನಸು, ವಾಸ್ತವತೆ ಹಾಗು ಕಲ್ಪನೆಗಳ ಸೊಗಸಾದ ಮೇಳವಾಗಿದೆ ಈ ಕಥೆ. ನಿಮ್ಮಿಂದ ಇನ್ನಿಷ್ಟು ಕಥೆಗಳು ಬರಲಿ.

    ReplyDelete