Wednesday, January 14, 2015

ಮಗ ಮಾಡಿದ ಮದುವೆ

ರಂಗೋಲಿಗಿಟ್ಟ ಚುಕ್ಕಿಯಂತಿತ್ತು ಧರಣಿಗಂಟಿದ ಬೆರಣಿ. ಊರೆಲ್ಲ ಬಿದ್ದ ಸೆಗಣಿಯ ತಂದು ಬೆರಳಣಿಕೆಯ ಬೆರಣಿ ತಟ್ಟಿ ಒಣಗಿಸಿ ಮಾರಾಟ ಮಾಡಿ ಬಂದ ಹಣವನ್ನು ತುಂಬಲಾರದ ತನ್ನ ಬದುಕೆಂಬ ಭರಣಿಯಲ್ಲಿ ತುಂಬ ತೊಡಗಿದನು ಧರಣೀಂದ್ರ. ಹೊಗೆ ಹಾರುತ್ತಿದ್ದ ಗಂಜಿಗೆ ತನ್ನ ಬಿಸಿಯುಸಿರ ಊದಿ ತಣ್ಣಗಾಗಿಸುವ ಪರಿಶ್ರಮದಲ್ಲಿದ್ದಳು ತಾಯಿ ಮಲ್ಲಿಕಾ. ಹೌದು ಮಗ ಧರಣಿಗೆ ಕಾಲೇಜಿಗೆ ಹೋಗಲು ತಡ ಆಗಲು ಇನ್ನು ಉಳಿದದ್ದು ಮೂರೇ ನಿಮಿಷ. ಅಮ್ಮನ ಬಿಸಿ ಉಸಿರ ಶಕ್ತಿಯ ಗಂಜಿಯನ್ನುಂಡ ಮಗ ಅವಅವಸರದಲ್ಲಿ ಪುಸ್ತಕ ತುಂಬಿದ ಬ್ಯಾಗನ್ನು ಹೇಗಲಿಗೇರಿಸಿ ಹೊರಟು ನಿಂತಿದ್ದನ್ನು ನೋಡಿದರೆ, ಬಿಸಿಲ ಬೇಗೆಯಲ್ಲಿ ಕಾಯುವುದಕ್ಕಾಗಿಯೇ ಕಾಯುತ್ತಿದ್ದ ಬೆರಣಿಗಳಿಗೂ ಒಮ್ಮೆ ಹೆಮ್ಮೆಯಾಗುತ್ತಿತ್ತು ನಮ್ಮನ್ನು ತಟ್ಟಿದಾತ ಇವನೇನಾ ವೀರ ಶಿಲ್ಪಿಯಂತಿರುವುದು.

       ತಾನು ಹುಟ್ಟುವ ಮೊದಲೇ, ಋಣ ಸಂಬಂಧ ತೀರುವ ಮೊದಲೇ ತೀರಿಕೊಂಡಿದ್ದರು ತಂದೆ. ತಂದೆ ಹೀಗಿದ್ದರು ಎಂದು ನೆನಪಿಸಿಕೊಳ್ಳುವುದಕ್ಕೆ ಒಂದು ಫೋಟೋನೂ ಉಳಿದಿಲ್ಲ ಸುಟ್ಟುಹೋದ ಮನೆಯಲ್ಲಿ.
ತುಂಬು ಗರ್ಭಿಣಿ ತನ್ನ ಕೂಸಿಗೆ ಪ್ರಪಂಚ ದರ್ಶನ ಮಾಡಲೆಂದು ಮಂಚದಲ್ಲಿ ನರಳುತ್ತಿದ್ದಳು ಸುಖದ ನೋವಿನಲ್ಲೂ. ಆಗಲೇ ಶೇಖರಣ್ಣ ಓಡೋಡಿ ಬಂದು ತಿಳಿಸಿದ್ದುಮಲ್ಲಿಕಾ ನಿನ್ನ ಮನೆಗೆ ಬೆಂಕಿ ಬಿದ್ದು ಮನೆ ಪೂರ್ತಿ ಸುಟ್ಟು ಗಂಡನ ಶವದ ಗುರುತು ಸಿಗದಾಗೆ ಆಗಿದೆ” ಎಂದು. ಮಲ್ಲಿಕಾಗೆ ಆಗಿನ್ನೂ ಹತ್ತೊಂಭತ್ತುವರೆ ವರ್ಷ ಇಪ್ಪತ್ತಕ್ಕೆ ಕಾಲಿಡಲು ಕಾದಿತ್ತು ಆಪತ್ತು. ಗಂಡ ತೀರಿಕೊಂಡ, ಮಗ ಹುಟ್ಟಿಕೊಂಡ. ಇಂದು ಮಗನಿಗೆ ಹದಿನೇಳು ತುಂಬಿದ್ದು ಗೊತ್ತೇ ಆಗಲಿಲ್ಲ.
       
          ಕಾಲೇಜಿನಲ್ಲಿ ನೋಟ್ಸ್ ಬರೆಯುತ್ತಿದ್ದಾಗ ದಣಿದ ದೇಹ ಮೆಲ್ಲನೆ ನಿದ್ದೆಗೆ ಜಾರುವಂತಿತ್ತು. ಪುಸ್ತಕದ ಮೇಲೆ ತಲೆ ಇಟ್ಟು ಒಂದರೆಘಳಿಗೆ ಮಲಗಿಬಿಟ್ಟರಾಯ್ತೆಂದು ತಲೆ ತಗ್ಗಿಸಿದರೆ.....,
ಓಡಿಹೋಯ್ತು ನಿದ್ದೆ, ತನ್ನ ಕೈಯ ಸೆಗಣಿ ಪರಿಮಳ ಮೂಗೊಳಗೆ ಸೇರಲು. ಹೆಮ್ಮೆ ಅನ್ನಿಸಿತು ಸೆಗಣಿ ಬಗ್ಗೆ, ತನ್ನ ಬದುಕಿಗೊಂದು ರೂಪಕೊಟ್ಟಿದ್ದು ಮಾತ್ರವಲ್ಲದೆ ಎಡವಿದಾಗ ಎಚ್ಚರಿಸಿದೆ, ಸೋತಾಗ ಗೆಲ್ಲುವ ಹುಚ್ಚೇರಿಸಿದೆ. ಒಂದುಕ್ಷಣ ಭಾವುಕನಾಗಿ ಕಿಟಕಿಯಾಚೆ ಕಾಣುವ ರಾಮನ ನೆನೆದು, ದೇವರೇ ನೀನೆ ನನ್ನನ್ನು ಚುರುಕಾಗಿಸಿದ್ದು ದೇವ ಎಂದು ರಾಮನನ್ನೇ ನೋಡುತ್ತಿದ್ದ. ಕಂಡಳಲ್ಲ ಪಕ್ಕದಲ್ಲೇ ಸೀತೆ. ಕ್ಷಣದಲ್ಲೇ ವಿಚಲಿತನಾದ. ತಡವಿಲ್ಲದಲ್ಲಿ ಭಕ್ತನೇ ಪ್ರತ್ಯಕ್ಷನಾದ ರಾಮನ ವಿಗ್ರಹದೆದುರು. ದೇವಿ ಸೀತಮ್ಮ ನಿನ್ನ ಪಕ್ಕದಲ್ಲಿ ರಾಮ, ಲಕ್ಷ್ಮಿ ಪಕ್ಕದಲ್ಲಿ ವಿಷ್ಣುಪಾರ್ವತಿ ಪಕ್ಕದಲ್ಲಿ ಈಶ್ವರ ಆದರೆ ನನ್ನಮ್ಮನ ಪಕ್ಕದಲ್ಲಿ.....ಮೂವತ್ತೆಂಟರ ಅಮ್ಮಗೆ ಅವರೆತ್ತರದ ನಂಟು ಬೇಕು. ನೆನಪಿಗೆ ಬಂದಿದ್ದು ತನ್ನ ಪಕ್ಕದ ಬೆಂಚಲ್ಲಿ ಕೂರುವ ಅಮ್ಮನ ಕಳಕೊಂಡ ಶ್ವೇತ, ತನಗೆ ಕನ್ನಡ ಸಾಹಿತ್ಯ ಪಾಠ ಮಾಡುವ ಗುರುಗಳ ಮಗಳಾಕೆ. ಗುರುಗಳ ಬಳಿಗೆ ಬಂದು ಮಾತಾಡದೆ ನಿಂತ. ಶಿಷ್ಯನ ಕಣ್ಣಲ್ಲಿ ಇಳಿವ ನೀರನ್ನು ತನ್ನುಂಗುರದ ಬೆರಳಲ್ಲಿ ಒರೆಸುತ್ತಾ ಕಾರಣ ಕೇಳಿದ ಗುರುಗಳ ಪ್ರಶ್ನೆಗೆ ಪ್ರತಿಯಾಗಿ ಅದೇ ಬೆರಳನ್ನು ಹಿಡದುಕೊಂಡು ಬೇಡಿದಬರಿದಾಗಿರುವ ನಿಮ್ಮ ಬೆರಳಿಗೆ ನನ್ನಮ್ಮ ತೊಡುವ ಉಂಗುರಕ್ಕೆ ಜಾಗ ಕೊಡುವಿರಾ ...... ಬೊಟ್ಟಿಲ್ಲದ ನನ್ನಮ್ಮನ ಹಣೆಗೆ ಬೊಟ್ಟನ್ನಿಟ್ಟು  ಮುತ್ತನಿಡುವಿರಾ.....”  ಕನ್ನಡ ಗುರುಗಳಿಗೆ ಮಾತು ಬರದೆ ತನ್ನ ಕಣ್ಣ ಅಡಿಯಲ್ಲಿ ನಿಂತ ಧರಣಿ ಮಗನಂತೆ ಕಂಡ. ಬರ ಸೆಳೆದು ಎದೆಗಪ್ಪಿಕೊಂಡು ಬೆನ್ನು ತಟ್ಟಿ ಅಮ್ಮನ ಒಪ್ಪಿಸೆನ್ನುವ ಮೂಲಕ ತನ್ನೊಪ್ಪಿಗೆ ಕೊಟ್ಟರು.
ಬೆರಣಿ ತಟ್ಟಿದವನನ್ನ ಎದೆಗಪ್ಪಿಕೊಂಡು ಬೆನ್ನು ತಟ್ಟಿದರು, ತನ್ನ ಒಪ್ಪಿಸಿದ ನೀ ನಿನ್ನಮ್ಮನೊಪ್ಪಿಸೆಂದು. ಅಮ್ಮನ ಬೇಡಿದರೆ ಬೇಡ ಎನ್ನುವರುಂಟೆ. ಮಗ ಮಾತಾಡಿದ ಅಮ್ಮಮಗನ ಮಾತಲ್ಲೇ ಆಡಿದಳು.
ಮಗನ ಮಾತು ಅಮ್ಮನಿಗೆ ನೀರಿಲ್ಲದ ಬಾವಿ ಮುಚ್ಚಿಹೋಗುವ ಕಾಲಕ್ಕೆ ವರುಣ ತಾನೇ ಮೆಚ್ವಿ ಧರೆಗಿಳಿದಂತಾಯ್ತು. ಮಗ ಮೆಚ್ಚಿದ ಹುಡುಗನ ಕರಗಳ ಕರಿಮಣಿಗೆ ಕೊರಳಾದಳು ತಾಯಿ.

ಸುಧಾಕರ್ ಜೈನ್

ಹೊಸ ಬೆಟ್ಟು ಗುತ್ತು



1 comment:

  1. ಕತೆ ಚಿಕ್ಕದಿದೆ. ಕತೆಯ ಸಂದೇಶ ಮಾತ್ರ ದೊಡ್ಡದು. ಕತೆಯ ಭಾವ ಹಾಗು ನಿರೂಪಣೆ ಚೆನ್ನಾಗಿವೆ.ಕತೆಯ ವಿವರಗಳು ವಾಸ್ತವವಾಗಿವೆ. ಅಭಿನಂದನೆಗಳು.

    ReplyDelete