Wednesday, November 12, 2014

ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ ......

 
           ನೀವೆಲ್ಲಾ ಹಕ್ಕಿಯಾದರೆ ನಾ ಬಾನಾಗುವೆ . ಮುಚ್ಚಿ ಬಿಡುವೆ ಎದೆಯ ಬಾಗಿಲ ,ಬೆಚ್ಚಗೆ ಇಡುವೆ ನಮ್ಮೊಲವ . ನೀವು ಹಕ್ಕಿಯಾದರೆ ನಾನದರ ಗೂಡಾಗುವೆ .  ಯಾರ ಹಂಗು ಇಲ್ಲದೆ ಸ್ವಚ್ಛಂದವಾಗಿ ಹಕ್ಕಿಯಂತೆ ಹಾರಾಡಬೇಕು ಎಂದು ಎಲ್ಲರೂ ಒಂದಿಲ್ಲ ಒಂದು ಸಲ ಅಂದುಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ.
                                           ಹಕ್ಕಿಯಾಗಿ ಹಾರಡಬೇಕು ಯಾವ ಜಂಜಾಟವಿಲ್ಲದೆ ,ತಿಳಿಯಾದ ಆಗಸ ,ಬಿಳಿ ,ಕರಿ ಮೋಡಗಳ ಜೊತೆ ಕುಣಿದಾಡುವ ಬಾನಾಡಿ,ಬಾಲ್ಯದಲ್ಲಿ ಬರುವ ಕಾಗಕ್ಕ ಗುಬ್ಬಕ್ಕನ ಕಥೆ ಕೇಳುವಾಗ ಹಕ್ಕಿಗಳೆಂದರೆ ನನಗೇನೋ ವಿಸ್ಮಯ , ಬಣ್ಣ ಬಣ್ಣದ ಕನಸು ಅದರ ಗೂಡು ,ಮರಿ,ಚಿಲಿ ಪಿಳಿ ಸದ್ದು,ಎಲ್ಲದರಲ್ಲೂ ಒಂದು ಕುತೂಹಲ . ಹೀಗೆ ಯೋಚಿಸುತ್ತಾ ಕಡಲ ತೀರದಲ್ಲಿ ಗೂಡಿಗೆ ಮರಳುವ ಬೆಳ್ಳಕ್ಕಿಗಳ ನೋಡಿ ಕನಸಿನ ರೆಕ್ಕೆ ಬಿಚ್ಚಿ ನನ್ನ ನಾನೇ ಮರೆತು ಹೋಗಿ ನಾನೇ ಒಂದು ಬೆಳ್ಳಕ್ಕಿಯಾಗಿ ಮುಗಿಲಲ್ಲಿ ಹಾರಾಡಿ ತೆಲಾಡಿದ್ದೆ . ನೀಲಿ ಆಕಾಶದಲ್ಲಿ ಯಾವ ಬೇಲಿ ಇಲ್ಲದೆ ಅನಂತದೆಡೆಗೆ ಸ್ವಚಂದವಾಗಿ ಹಾರಾಡಿದ್ದೆ .
                                         ಮೂಕ ಹಕ್ಕಿಯಾಗಿ ನೊಡುತಿರುವೆ  ಗಾಳಿ ಬೀಸುವ ದಿಕ್ಕನು..ಮೌನವಾಗಿ ಕಾಯುತಿರುವೆ  ಮರಳಿ ಬರುವ ಹೊಸ ಹುಚ್ಚು ಕನಸಿನೊಂದಿಗೆ ...ಬಾನಾಡಿಯಲಿ ಹಾರುವ ಹಕ್ಕಿಗಳ ನೋಡುತ್ತಾ . ಕಾಗೆಯಂತಾಗಬೇಕು ಒಂದಗುಳ ಕಂಡರೂ ಕರೆಯುತ್ತದಲ್ಲ ತನ್ನೆಲ್ಲಾ ಬಳಗವನ್ನು ಹಾಗೆ ಆಗಬೇಕು ಎಂದೆನಿಸಿತ್ತು .
                             ಗುಬ್ಬಚ್ಚಿಯಾಗಿ  ಆಕಾಶದೆಲ್ಲೆಲ್ಲ ಹಾರಾಡಬೇಕೆನ್ನುವ ಆಸೆ..ಆದರೆ ಪುಕ್ಕಗಳಿಲ್ಲ ಪಕ್ಕದಲಿ.ಹಕ್ಕಿಯಂತೆ ಹಾಡಬೇಕೆನ್ನುವ ಹಂಬಲ ಹಾಡಿದರೆ ಕೇಳುವವರಿಲ್ಲ. ಪುಕ್ಕ ಇಲ್ಲದಿದ್ದರೇನಂತೆ ಭಾವವಿದೆ,ಮನಸ್ಸು ಬಿಚ್ಚಿ ಭಾವತುಂಬಿ ಆಕಾಶದುದ್ದಕ್ಕೂ ಹಾರಿ ಬರುವೆ,ಗುಬ್ಬಚ್ಚಿ ಜೊತೆ ಮಾತಾಡಿಬರುವೆ.ಚಿಗುರೊಡೆದ ಭಾವನೆಗೆ ಪದರೂಪ ಕೊಟ್ಟು ಹಕ್ಕಿಯಂತೆ ಹಾಡಿಬಿಡುವೆ.ಕೇಳಿಕೊಂಡವರು ನೆಚ್ಚಿಕೊಂಡರೆ ನಲಿಯುವೆ.ನನ್ನ ಭಾವಕ್ಕೊಂದು ಪದರೂಪ ಕೊಟ್ಟು ಈಗ ನಿಮ್ಮ ಮುಂದೆ ತಂದಿರುವೆ . 
                                    ಹಾರುತ್ತಿದ್ದೆ ಹಿಂತಿರುಗಿ ನೋಡದೇ ಮುಂದಕ್ಕೆ ಸಾಗಿತ್ತು ಮುಂದಾಲೋಚನೆಯಿಂದ ಮೇಲಕ್ಕೆ ಏರಿದ್ದೆ  ಬೆಟ್ಟದೆತ್ತರಕ್ಕೆ  ಹೀಗೇ ಸಾಗುತ್ತ ಸಾಗುತ್ತಾ  ಹಿಂತಿರುಗಿ ನೋಡುವ ಮನಸ್ಸಾಯಿತು ತಿರುಗಿಸಿದೆ  ಕತ್ತು ಹಿಂದಿದ್ದ ಹಕ್ಕಿಗಳೆಲ್ಲ ಮುಂದಕ್ಕೆ ಹೋಗಿತ್ತು    ನಾ ಹಿಂದೆ ಬಿದ್ದಿದ್ದೆ  ಹಾಗೇ ಹೋಗುತ್ತ ಇನ್ನೊಮ್ಮೆ ನೋಡಿದೆ ಕೆಳಗೆ ’ಅಬ್ಬ ಭೂಮಿಯೆ! ನಾನೆಷ್ಟು ಮೇಲೆ!’ ಅಚ್ಚರಿಪಡುತ್ತ ನಿಂತಿದ್ದೆ  ಒಂದು ಕ್ಷಣ ಹಾಗೇ.
 ಮರುಕ್ಷಣವೆ ಧೊಪ್ಪನೆ ಬಿದ್ದಿದ್ದೆ  ಭೂಮಿಯಮೇಲೆ! ಹೆಣದ ಸುತ್ತಲು ನೆರೆದ ಹಕ್ಕಿಗಳು ಅಂದುಕೊಂಡವು ಇದೆಂಥ ವಿಸ್ಮಯ ! ಮನುಷ್ಯನ ಭೇಟೆಗೆ ಬಲಿಯಾಗಿದ್ದೆ  .
                                       ವಾಸ್ತವಕ್ಕೆ ಬಂದಾಗ ಅನಿಸಿದ್ದು ಮನುಷ್ಯ ಹಕ್ಕಿಯಂತೆ ಹಾರಲು ಕಲಿತು ಮುಗಿಲೆತ್ತರಕ್ಕೆ  ಮೆರೆದಾಡಿದ , ಆದರೆ ಮನುಷ್ಯನಾಗಿ ಭೂಮಿಯಲ್ಲಿ ಬದುಕಲು ಕಲಿಯದೇ ಹೋದ. ಇದೆಂತ ವಿಚಿತ್ರ ಅಲ್ವಾ ? ಈ ವಾಸ್ತವದ ಬದುಕಿನಲ್ಲಿ ಕನಸು ಎಂಬುದು ಮಾತ್ರ ಸುಂದರ..
ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ ......
            ---------------ಸವಿತಾ  ಗುರುಪ್ರಸಾದ್

No comments:

Post a Comment