Wednesday, January 14, 2015

ಬೆರಣಿ ತಟ್ಟುವ ಹುಡುಗನ ಬದುಕು

"ಅಯ್ಯೋ ಇವತ್ತ್ಯಾಕೆ ನನ್ನ ಸೆಗಣಿಯ ಗೋಣಿ ತುಂಬ್ತಿಲ್ಲ. ಇಂತಹಾ ಮಳೆಗಾಲದಲ್ಲಿ ಎಲ್ಲಿ ನೋಡಿದ್ರೂ ಹಸಿರೇ ಕಾಣಿಸ್ತಿರುವಾಗ ದನಗಳಿಗೆ ಮಾತ್ರ ತಿನ್ನಲು ಏನೂ ಸಿಗದೆ ಹೋಯಿತೇ" ಎಂದು ಮನದೊಳಗೆ ಗೊಣಗುತ್ತ ಸಂತೋಷನು ಇಂದು ನಾಲ್ಕೈದು ಮೈಲಿ ದೂರ ನಡೆದನು. ಹತ್ತು ವರ್ಷದ ಬಾಲಕ ಬೆನ್ನಿನಲ್ಲಿ ಪುಸ್ತಕ ಹೊತ್ತು ಶಾಲೆಗೆ ಹೋಗುವ ಬದಲಾಗಿ ಗೋಣಿಚೀಲವನ್ನು ಹೊತ್ತು ಸೆಗಣಿ ಹೆಕ್ಕಲು ಹೊಲ-ಗದ್ದೆ, ಕಾಡು-ಮೇಡು, ಬೀದಿಗಳಲ್ಲಿ ದಿನಕ್ಕೆರಡು ಬಾರಿ ಐದಾರು ಮೈಲಿ ದೂರ ಹೋಗಿ ಬರುತ್ತಿದ್ದನು. ತನ್ನಷ್ಟೆ ಎತ್ತರದ ಗೋಣಿಚೀಲದಿಂದ ಹಸಿ ಸೆಗಣಿಯನ್ನು ಮನೆಯ ಅಂಗಳದಲ್ಲಿ ಸುರಿಯುವನು. ನಂತರ ತನ್ನ ಪುಟ್ಟ ಅಂಗೈಯಲ್ಲಿ ದುಂಡಗಿನ ಬೆರಣಿ ತಟ್ಟಿ ಅದನ್ನು ಒಣಗಿಸಿ ಅಟ್ಟಿಗಟ್ಟುತ್ತಿದ್ದನು. ಅಟ್ಟಿಗೆ ದಿನದ ಟಾರ್ಗೆಟ್ ಅಥವಾ ಅಳತೆ ತನ್ನ ಎತ್ತರವೇ ಆಗಿರುತ್ತಿತ್ತು. "ಏಯ್ ನನ್ನ ಕೈ ಮೇಲೆ ಬರಬೇಡಿ, ಕಚಗುಳಿ ಇಡಬೇಡಿ" ಎಂದು ಬೇಡಿಕೊಳ್ಳುತ್ತಿದ್ದನು ಸೆಗಣಿಯಲ್ಲಿರುವ ಹುಳಗಳೊಡನೆ. ಬಹುಶಃ ಆತ ತನ್ನ ಮನಸ್ಸಿನ ಮಾತುಗಳನ್ನು ಆಡುವುದಾದರೆ ಅದು ಹುಳಗಳೊಂದಿಗೆ ಮಾತ್ರ ಇರಬೇಕು. ಹೀಗೆ ನಿರ್ಜೀವದೊಡನೆ ಕೆಲಸ ಮಾಡುತ್ತಿರುವಾಗಲೂ ಅದರಲ್ಲಿ ಸಜೀವಗಳನ್ನು ಹುಡುಕಿ ತಾನು ಮಾಡುವ ಕಾಯಕಕ್ಕೆ ಜೀವ ತುಂಬುತ್ತಿದ್ದನು. ಬಾಕಿ ಹೊತ್ತೆಲ್ಲ ಬರೀ ಮೂಕ ವೇದನೆ.
          ಅಪ್ಪನನ್ನು ಕಳೆದುಕೊಂಡು ಸಂತೋಷ ಒಂಟಿಯಾಗಿದ್ದಅಮ್ಮ ಹೆಸರಿಗೆ ಮಾತ್ರ ಮಾತೆಯಾಗಿದ್ದಳು, ಮಮತೆಯೆಂದರೇನೆಂಬುದನ್ನೇ ಮಗ ಅನುಭವಿಸಿರಲಿಲ್ಲ. ತಾನು ಕಲಿತ ಬೀಡಿ ಕಟ್ಟುವ ಉದ್ಯೋಗವನ್ನೇ ನೆಪ ಮಾಡಿಕೊಂಡು ಹಿಂದಿನ ಮನೆಗೆ ಹೋಗಿ ಅಲ್ಲಿನ ಸದಸ್ಯರೊಂದಿಗೆ ಸೂರ್ಯಾಸ್ತದವರೆಗೂ ಹರಟುತ್ತಿದ್ದಳು. ರಾತ್ರಿಯಾದಾಗ, ಹಿಂದಿನ ಮನೆಯಿಂದ ಹಿಂತಿರುಗಿ ಬರುವ ತಾಯಿಗಾಗಿ ಜೊತೆಗೆ ಆಕೆಯ ಕೈಯಡುಗೆಗಾಗಿ ಕಾಯುತ್ತಿದ್ದನು. ಹೌದು ರಾತ್ರಿ ಮಾತ್ರ ಅಮ್ಮನ ದರುಶನ ಭಾಗ್ಯ. ಅದೇಕೊ ತಾಯಿಗೆ ಹಿಂದಿನ ಮನೆ ಹಿಡಿಸಿದಷ್ಷು ಮಗನಿಗೆ ಹಿಡಿಸುತ್ತಿರಲಿಲ್ಲ. ಹಾಗಾಗಿ ಅವರೊಂದಿಗಿನ ಅಮ್ಮನ ಜಂಟಿತನ ಮಗನ ಒಂಟಿತನಕ್ಕೆ ಕಾರಣವಾಗಿತ್ತು.
           ತಂದೆ ತೀರಿಕೊಂಡಾಗ ಮಗನಿಗಿನ್ನೂ ಆರು ವರ್ಷವೂ ಪೂರ್ತಿಯಾಗಿರಲಿಲ್ಲ. ಸಂತೋಷನ ಹುಟ್ಟು ತಂದೆಯ ಕನಸಿನ ಕೃಷಿಗೆ ವಸಂತಕಾಲ ಬಂದಂತಾಗಿತ್ತು. ಆದರೆ ಮಗನಿಗೆ ಆರು ವರ್ಷ ಪೂರ್ಣವಾಗುತ್ತ ರೆಕ್ಕೆಪುಕ್ಕಗಳು ಬೆಳೆಯಲಾರಂಭಿಸಿದಾಗ ತಂದೆ ಮಹಾಬಲನ ಪ್ರಾಣಪಕ್ಷಿ ಹಾರಿಹೋಯಿತು. ಕನಸೆಂಬ ಗೋಪುರದ ಒಂದು ಇಟ್ಟಿಗೆಯೂ ಉಳಿಯದೆ ಸಂಪೂರ್ಣವಾಗಿ ಜರಿದು ಬಿತ್ತು. ಇಷ್ಟರಲ್ಲೇ ಮಗನ ಹಣೆಯಲ್ಲಿ ಮೂಡುತ್ತಿದ್ದ ವಿದ್ಯಾಭ್ಯಾಸದ ಗೆರೆಯೂ ಅಳಿಸಿ ಹೋಯಿತು. ಬೇಜವಾಬ್ದಾರಿ ಶೀಲಾ ಮಗನನ್ನು ಓದಿಸುವ ಬದಲಾಗಿ ಗುಡ್ಡಗಾಡಿಗೆ ಹೋಗಿ ಸೆಗಣಿಹೆಕ್ಕು ಎಂದು ಮಲತಾಯಿಯಂತೆ ಹೀಯಾಳಿಸತೊಡಗಿದ್ದಳು. ಮುಗ್ದ ಸಂತೋಷ ಬೆರಣಿ ಮಾಡಿ ಮಾರುವ ಕೆಲಸವನ್ನು ತನ್ನ ಜೀವ ಹಾಗೂ ಜೀವನವನ್ನಾಗಿ ಮಾಡಿಕೊಂಡು ಜೀವಿಸತೊಡಗಿದನು.
              ಆದರೆ ದಿನ ಮಾತ್ರ ತನ್ನ ಬೆರಣಿ ಮಾಡಿದ ದುಡ್ಡಿನಿಂದ ತಾಯಿಗೆ ಜೀವನ ಕಟ್ಟಿಕೊಡುವ ಉತ್ಸಾಹದಲ್ಲಿದ್ದನು. ದಿನಕ್ಕೆರಡು ಬಾರಿ ಸೆಗಣಿ ಹೆಕ್ಕಿ ತಂದು ಬೆರಣಿಯ ಎರಡು ಅಟ್ಟಿ ಮಾಡುತ್ತಿದ್ದ ಸಂತೋಷ ಈಗೆರಡು ದಿನಗಳಿಂದ ನಾಲ್ಕು ಬಾರಿ ಸೆಗಣಿ ತಂದು ನಾಲ್ಕು ಅಟ್ಟಿ ಬೆರಣಿ ಮಾಡಿ ಮಾರಿ ಬಂದಿದ್ದನು. ಮಗನಿಗೆ ರೀತಿ ಉತ್ಸಾಹ ಬರಲು ಕಾರಣ ಏನೆಂದು ಅಮ್ಮನಿಗೇ ಕೇಳಿದರೂ ಗೊತ್ತಿರಲಿಕ್ಕಿಲ್ಲ. ಆದರೆ ಅಮ್ಮ ಹೇಳಿದ ಮಾತಾದ "ಹಿಂದಿನ ಮನೆಯ ರಮೇಶನೊಡನೆ ಮದುವೆಯಾಗಬೇಕೆಂದುಕೊಂಡಿದ್ದೇನೆ. ಇದಕ್ಕಾಗಿ ಹಣ ಬೇಕಾಗಿದೆ, ಕೊಡುತ್ತೀಯಾ" ಎಂದು ಅಮ್ಮ ಹೇಳಿ ಬಾಯಿ ಮುಚ್ಚುವುದೊರಳಗಾಗಿ ಕೂಡಿಟ್ಟಿದ್ದ ದುಡಿಮೆಯ ಹಣವನ್ನು ತಂದು ಝಲ್ಲೆಂದು ಅಮ್ಮನ ಸೆರಗಿಗೆ ಸುರಿದ. ಹೌದು ಮೊದಲ ಬಾರಿಗೆ ಮೌನ ಮುರಿದು ಮಾತಾಡಿದ್ದಳು ಅಮ್ಮ. ಖುಷಿಗೆ ಸರ್ವಸ್ವವನ್ನೇ ಕೊಟ್ಟುಬಿಡಲು ತಯಾರಾಗಿದ್ದ ಸಂತೋಷನಿಗೆ ಹೆಚ್ಚಿನ ದುಡಿಮೆ ಯಾವ ಲೆಕ್ಕ ಹೇಳಿ. ಅಷ್ಟೇ ಸಾಲದೆಂದು ಆತನ ಹೆಸರಿನಲ್ಲಿದ್ದ ಮನೆಪತ್ರವನ್ನು ಸಹಿಗೆಂದು ಅಮ್ಮ ಮುಂದೆ ಚಾಚಿದಾಗ ಅವಿದ್ಯಾವಂತ ಸಂತೋಷ ಬೆರಳಂಚಿನಲ್ಲಿ ನೀಲಿಶಾಯಿಯನ್ನು ಪೇಪರಿನ ಮೇಲೆ ತಟ್ಟಿದನು ಬೆರಣಿ ತಟ್ಟಿದಂತೆ. ಅಮ್ಮ ಇದೇ ರೀತಿ ತನ್ನ ಜೊತೆ ಮಾತಾಡುತ್ತಿದ್ದರೆ ಅಷ್ಟೇ ಸಾಕು ಇನ್ನೇನು ಬೇಕು ತನಗೆ ಎಂಬ ಮುಗ್ಧ ಪ್ರೀತಿ ತುಂಬಿಕೊಂಡಿದ್ದನು, ಮೋಸದ ಎಳೆಯನ್ನೂ ಅರಿಯದ ಸಂತೋಷ.
ಆದರೆ ಇಲ್ಲಿಗೆ ಸಂಪೂರ್ಣ ಅನಾಥನಾದ ಸಂತೋಷ. ಹಿಂದಿನ ಮನೆಯ ರಮೇಶನ ಮೋಹದ ಬಲೆಗೆ ಬಳಿಯಾಗಿದ್ದ ಶೀಲಾಳು ಮಗನ ದುಡಿಮೆಯ ಜೊತೆಗೆ, ಮನೆಯನ್ನೂ ಮಾರಿದ ಹಣದೊಂದಿಗೆ ಮಗನ ಮನದಿಂದ ಶಾಶ್ವತವಾಗಿ ದೂರವಾದಳು. ಅಂದು ತನ್ನ ಅನೈತಿಕ ವರ್ತನೆಯಿಂದಾಗಿ ಗಂಡನನ್ನು ಬಾರದ ಲೋಕಕ್ಕೆ ಕಳಿಸಿಕೊಟ್ಟಿದ್ದಳು. ಇಂದು ಮಗನನ್ನು ಆತನ ಸೆಗಣಿಯಂತೆಯೇ ಬೀದಿಪಾಲು ಮಾಡಿದಳು. ಇನ್ನು ಮುಂದೆ ಯಾರ ಸರದಿಯೋ ಆಕೆಗೊಬ್ಬಳಿಗೇ ಗೊತ್ತು.

                        *- ಸೌಮ್ಯಶ್ರೀ



1 comment:

  1. ಇಂತಹ ತಾಯಂದಿರೂ ಇರುತ್ತಾರೆ!

    ReplyDelete