Wednesday, January 14, 2015

ಬೆರಣಿ ಭಾಸ್ಕರ

ಶವದ ಶುದ್ಧಿಯಾಗಿತ್ತು. ಬಂಧು ಬಾಂಧವರು ತುಳಸಿ ಕುಡಿಯಲ್ಲಿ ನೀರು ಬಿಟ್ಟೂ ಆಗಿತ್ತು. ಅಂತಿಮ ಯಾತ್ರೆಗೆ ಊರ ಅರ್ಚಕರು ಇಟ್ಟಿದ್ದ ಘಳಿಗೆಯೂ ಹತ್ತಿರವಾಗಿತ್ತುಎಲ್ಲರ ದೃಷ್ಟಿ ಅತ್ತ ಕಡೆಯೇ ನೆಟ್ಟಿತ್ತು. ಛೇ.., ಇವ ಎಲ್ಲಿ ಹೋದ..? ಬರಬೇಕಿತ್ತಲ್ವಾ ಇಷ್ಟೊತ್ತಿಗೆ.

ಟಿಂಗ್ .., ಟಾಂಗ್.. ಬಂದೇ ಬಿಟ್ಟ. ಸೈಕಲ್ ಕ್ಯಾರಿಯರ್ನಿಂದ ಇಳಿಸಿಯೇ ಬಿಟ್ಟ. ಒಂದು ಗೋಣಿ ಬೆರಣಿ ಜೊತೆ ಬಂದವ ಬೆರಣಿ ಭಾಸ್ಕರ.

ಎಲ್ಲಿ ಮಾರಯಾ..? ಎಷ್ಟೊತ್ತು..? ಕಾಶೀನಾಥರೇ ಕ್ಷಮಿಸಿ, ಬರ್ಬೇಕಾದ್ರೆ ಜೋರು ಮಳೆ. ಬೆರಣಿ ಒದ್ದೆಯಾಗ್ಬಾರದು ಅಂತ ನಿಂತೆ ಅಂದ ಭಾಸ್ಕರ. ಬೆರಣಿ ಗೋಣಿ ಹೆಗಲೇರಿಸಿ ಹೊರಟ. ವಿಶ್ವನಾಥ ಭಟ್ಟರ ಶವದ ಯಾತ್ರೆಯೂ ಹೊರಟಿತು.

ವಿಧಿ ವಿಧಾನ ಮುಗಿಯೋ ತನಕ ಭಾಸ್ಕರ ಬೆರಣಿಯ ದುಡ್ಡು ಮುಟ್ಟುವುದಿಲ್ಲ. ಎಲ್ಲಾ ಮುಗಿಯುವವರೆಗೆ ಮನೆಯವರ ಜೊತೆಗಿದ್ದು, ಜೀವನದಲ್ಲಿ ಮುಂದೆಂದೂ ತನಗೆ ಸಿಗಲು ಸಾಧ್ಯವೇ ಇರದ ಪರಮ ಪುಣ್ಯವನ್ನು ಬೇರೆಯವರ ಕಾರ್ಯದಲ್ಲಿ ತೊಡಗಿಸಿಕೊಂಡು ಪಡೆಯುತ್ತಿದ್ದ. ಕಾಶೀನಾಥರು 350 ರೂಪಾಯಿ ಕೊಟ್ಟರು. ಭಾಸ್ಕರ ಸೈಕಲ್ ಏರಿದ.

ಹುಟ್ಟುವಾಗ ಬಡವನಾಗಿ ಹುಟ್ಟು. ಅದು ನೀನೋ, ನಿನ್ನಪ್ಪನೋ ಮಾಡಿದ ಕರ್ಮ. ಆದ್ರೆ ಸಾಯುವಾಗಲೂ ಬಡವನಾಗಿ ಸತ್ತರೆ ನಿನ್ನಷ್ಟು ಮೂರ್ಖರಿಲ್ಲ ಜಗದಲಿ.. ಭಧ್ರಗಿರಿ ಅಚ್ಯುತದಾಸರು ಹರಿಕಥೆಯ ನಡುವೆ ಹೇಳಿದ್ದ ಮಾತು ಭಾಸ್ಕರನಿಗೆ ಇನ್ನೂ ಮರೆತಿರಲಿಲ್ಲ. ಅದು ಅವನ ಮನಸ್ಸಿಗೆ ನಾಟಿತ್ತು. ಅದೇ ಅವನ ಜೀವನದ ಪಾಠ.

ಅಮ್ಮಾ.., ಊಟಾ....

ಅಂಗಳಕ್ಕೆ ಬಂದಿಲ್ಲ.., ಸೈಕಲ್ಲಿಂದ ಇಳಿದಿಲ್ಲ. ಹಸಿವಾಗ್ತಿದೆ ಅಮ್ಮಾ.., ನಂಗೂ ಹಸಿವಾಗ್ತಿದೆ.., ನಿನ್ಗೋಸ್ಕರ ನಾನೂ ಕಾದಿಲ್ವೇನೋ.., ಮನೆಯೊಳಗಿಂದ ಹೊರಬಂದಳು ಪಾರ್ವತಿ. ಪಾರ್ವತಿ ಭಾಸ್ಕರನ ತಾಯಿ. ಪಾರ್ವತಿ ಗಂಡ ಪ್ರಾಣೇಶ ಪ್ರಾಣಬಿಟ್ಟ ಮೇಲೆ ಈಕೆಗೆ ಭಾಸ್ಕರನೇ ಜಗತ್ತು. ಇವನಿಗೆ ಅಮ್ಮನೇ ಸಂಪತ್ತು.

ಭಾಸ್ಕರನಿಗೆ ಭಾಸ್ಕರ ಅಂತ ಹೆಸರಿಡಲು ಇನ್ನೂ ಆರು ತಿಂಗಳು ಬಾಕಿಯಿತ್ತು. ಮನೆಗಿನ್ನೂ ಮೂರನೇ ಜೀವ ಬಂದಿರಲಿಲ್ಲ. ಆದ್ರೂ ನಾವು ಮೂರು ಮಂದಿ.., ನಾವು ಮೂರು ಮಂದಿ ಅಂತ ಹೇಳುತ್ತಾ ಓಡಾಡುತ್ತಿದ್ದ ಪ್ರಾಣೇಶ. ಮಗುವೆಂದರೆ ಪ್ರಾಣವೇ ಬಿಡುತ್ತಿದ್ದ. ಆದ್ರೆ ಮಗು ಮನೆ ಸೇರುವ ಮೊದಲೇ ಪ್ರಾಣೇಶ ಮಸಣ ಸೇರಬೇಕಾಯ್ತು. ಬ್ಲಡ್ ಕ್ಯಾನ್ಸರ್ ಅವನನ್ನು ಬಲಿ ತೆಗೆದುಕೊಂಡಿತ್ತು.

ಪಾರ್ವತಿ 6 ತಿಂಗಳು ಏಕಾಂಗಿ. ಆಕೆಯ ಛಲ- ಭಾಸ್ಕರನ ರಕ್ತದಲ್ಲಿ ಬೆರೆತಿತ್ತು. ಅದೇ ಛಲ ಭಾಸ್ಕರನನ್ನು ನಾಲ್ಕು ಗಂಟೆಗೆ ಎಬ್ಬಿಸುತ್ತಿತ್ತು. ಬೆರಣಿ ತಟ್ಟಿಸುತ್ತಿತ್ತು. ವ್ಯಾಪಾರ ಮಾಡಿಸುತ್ತಿತ್ತು. ಏಳುವಾಗ ನಾಲ್ಕೂವರೆ ಆಗಿಬಿಟ್ಟರೆ, ಎದುರು ಮನೆ ಮಹೇಶ ಇಡೀ ಊರಿನ ಸೆಗಣಿಯನ್ನು ಹೆಕ್ಕಿ ಬಿಡುತ್ತಿದ್ದ. ನೀರು ಕಲಸಿ ತೆಂಗಿನ ಬುಡಕ್ಕೆ ಸುರಿದು, ಮತ್ತೊಂದು ನಿದ್ದೆ ಮಾಡುತ್ತಿದ್ದ. ಬೆರಣಿಗೆ ಬೇಕಲ್ಲಾ ಸೆಗಣಿ. ಹ್ಮೂ...! ಅಂದು ಇವ ಬರೀ ಭಾಸ್ಕರ.. ಭಾಸ್ಕರನಿಗೆ ಬೇಸರದ ಮೋಡ ಕವಿಯುತ್ತಿತ್ತು.

ಭಾಸ್ಕರನ ಬೆರಣಿ ಮಾಮೂಲಿ ಬೆರಣಿಯಲ್ಲ. ಅದು ಛಲದ ಬೆರಣಿ. ಪ್ರತಿ ಬೆರಣಿಯನ್ನು ಅಮ್ಮನ ಖಾಲಿ ಹಣೆಗೋ, ಕರಿಮಣಿಯಿಲ್ಲದ ಕೊರಳಿಗೋ, ಬಳೆಗಳಿಲ್ಲದ ಕೈಗಳಿಗೋ ತಟ್ಟುತ್ತಿದ್ದ. ವಿಧವೆ ಅಮ್ಮನಿಗೊಂದು ಮದುವೆ ಮಾಡಿಸಬೇಕೆಂಬ ಛಲದಿಂದ ತಟ್ಟುತ್ತಿದ್ದ - ತಿರುವಿ ಹಾಕುತ್ತಿದ್ದ - ಮಾರುತ್ತಿದ್ದ ಛಲದ ಬೆರಣಿ.

ಅಮ್ಮನ ಮೇಲೆ ಓರಗೆಯವರು ಕಣ್ಣು ಹಾಕಿದರೆ ಯಾವ ಮಗ ಸುಮ್ಮನಿರ್ತಾನೆ. ಇವ ಸುಮ್ಮನಿರಲೇಬೇಕಾದ ವಯಸ್ಸಿನವ. ಸುಮ್ಮನಿರುತ್ತಿದ್ದ. 27 ವಯಸ್ಸಿಗೆ ಬರಬೇಕಾದ ಬುದ್ಧಿ.., ಭಾಸ್ಕರನಿಗೆ 7ನೇ ವಯಸ್ಸಿಗೆ ಬಂದುಬಿಟ್ಟಿತ್ತು. ಅಮ್ಮನಿಗೊಂದು ಮದುವೆ ಮಾಡುವ ನಿರ್ಧಾರ ಮಾಡಿದ್ದ. ಅಮ್ಮನಿಗೂ ಅದನ್ನು ಹೇಳಿದ್ದ.

ಛಲಗಾರ್ತಿ ಪಾರ್ವತಿ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಮಗನನ್ನು ಬೆಳೆಸಿದಳು. ನೀನೇ ಮುಂದೆ ನಿಂತು ಮದುವೆ ಮಾಡು. ನಿನ್ನ ಇಷ್ಟ ನನ್ನಿಷ್ಟ. ಎಷ್ಟು ದಿನ ಕಷ್ಟ. ಹದ್ದುಗಳ ಕಣ್ಣು ಪಾರ್ವತಿಯನ್ನು ಕುಕ್ಕುತ್ತಿತ್ತು.. ನಿತ್ಯ ಆಕೆಯನ್ನು ಕುಗ್ಗುವಂತೆ ಮಾಡುತ್ತಿತ್ತು.

ಮನೆಯ ಹಿಂದಿನ ಜಾಗದಲ್ಲಿ ಭಾಸ್ಕರನ ಬೆರಣಿ ಗೋಡಾನ್. ಕುಟ್ಟಿ ಶೆಟ್ಟರ ಅಂಗಡಿಯ ನೀರುಳ್ಳಿ ಗೋಣಿ 2 ರೂಪಾಯಿಗೆ ಮಾರಾಟವಾಗುತ್ತದೆ. ಭಾರೀ ಡಿಮ್ಯಾಂಡ್ ನೀರುಳ್ಳಿ ಗೋಣಿಗೆ. ತಂದೆಯಿಲ್ಲದ ಭಾಸ್ಕರನನ್ನು ಕಂಡರೆ ಶೆಟ್ರಿಗೆ ಅಕ್ಕರೆ. ನೀರುಳ್ಳಿ ಗೋಣಿ ಜೊತೆ ಸಕ್ಕರೆಯ ಗೋಣಿಯನ್ನೂ ಮಡಚಿ ಮೂಲೆಯಲ್ಲಿಟ್ಟು ಭಾಸ್ಕರನಿಗೆ ಕಾಯುವಷ್ಟು ಅಕ್ಕರೆ. ಗೋಣಿ ಕ್ಯಾರಿಯರ್ನಲ್ಲಿಟ್ಟು, ಒಂದು ಜೇನು ಮಿಠಾಯಿ ಕೊಟ್ಟು, ಒಂದೇ ರೂಪಾಯಿ ತೆಗೆದುಕೊಳ್ಳುತ್ತಿದ್ದರು.. ಗೋಣಿಗೂ ಮಿಠಾಯಿಗೂ.

ಬೀಡಿ ಬ್ರಾಂಚಿನ ಹರೀಶ ಪಾರ್ವತಿಯ ಮಾವನ ಮಗ. ಪ್ರಾಣೇಶನಿಗೆ ಪಾರ್ವತಿಯನ್ನು ಕೊಟ್ಟಾಗ ಅತ್ತೆ ಮಗಳ ಮದುವೆಗೆ ಬಾರದೆ ಕುಳಿತವ. ಪ್ರಾಣೇಶ ತೀರಿಹೋದ ಮೇಲೆ ಪಾರ್ವತಿಗೆ ಧೈರ್ಯ ಕೊಟ್ಟವ. ಕೆಲಸ ಕೊಟ್ಟವ. ಬದುಕಿಗೊಂದು ಶಕ್ತಿ ಕೊಟ್ಟವ. ಸಂಬಂಧ ಪ್ರಕಾರ ಭಾಸ್ಕರನಿಗೆ ಹರೀಶ ದೊಡ್ಡಪ್ಪ. ಅಪ್ಪನ ಸ್ಥಾನದಲ್ಲಿ ನಿಂತು ಭಾಸ್ಕರನಿಗೆ ಮದುವೆ ಮಾಡಬೇಕಾದ ಹರೀಶ.., ಭಾಸ್ಕರನಲ್ಲಿ ನಿನ್ನಮ್ಮನನ್ನು ನನಗೆ ಮದುವೆ ಮಾಡಿಕೊಡುವೆಯಾ.. ಎಂದರೆ..? ಎಂದರೇನು..? ಎಂದೇ ಬಿಟ್ಟ.. ಭಾಸ್ಕರ ಸ್ಥಬ್ಧ.

ರಾತ್ರಿ ಜಗಲಿ ಮೇಲೆ ಮಲಗಿ ಆಕಾಶ ನೋಡುತ್ತಿದ್ದಾಗ, ಮಾವನ ಮಾತು ಭಾಸ್ಕರನ ಮನದಲ್ಲಿ ಮಿನುಗಿತು. ಕೋಟಿ ನಕ್ಷತ್ರಕ್ಕೆ ಆಕಾಶದಾಶ್ರಯ. ಮನೆಯಲ್ಲಿರುವ ಒಂಟಿ ನಕ್ಷತ್ರಕ್ಕೆ..? ಪೂರ್ವದಲ್ಲಿ ಚಂದಿರ ಮೂಡಿದ. ಬಾಸ್ಕರ ಮನೆಯೊಳಗೆ ಓಡಿದ. ಅವನ ಮನಸ್ಸು ಹುಣ್ಣಿಮೆಯಾಯ್ತು. ಅಮ್ಮನ ಮದುವೆ ನಿಶ್ಚಿಯವಾಯ್ತು.

ಕಾಶೀನಾಥರ ತಂದೆಯ ಅಂತ್ಯ ಸಂಸ್ಕಾರಕ್ಕೆ ಘಳಿಗೆ ನೋಡಿದ್ದ ಗೋಪಾಲ ಭಟ್ಟರೇ ಭಾಸ್ಕರನ ಬದುಕಿನ ಸಾರ್ಥಕತೆಯ ಕ್ಷಣಕ್ಕೆ ಮುಹೂರ್ತವಿಟ್ಟರು. ಭಾಸ್ಕರ ಬೆರಣಿ ತಟ್ಟಿದ ಕೈಯ್ಯಲ್ಲಿ ಮನೆಗೆ ತೋರಣ ಕಟ್ಟಿದ. ತೆಂಗಿನ ಕಾಯಿಯಿಂದ ಮುಚ್ಚಿದ ಕಲಶದಲ್ಲಿ ತಾಯಿಗೆ ಧಾರೆಯೆರೆದ. ಅರಶಿನ ಕುಂಕುಮ ಬೆರೆತ ಅಕ್ಷತೆ ಕಾಳುಗಳನ್ನು ತಾಯಿಯ ತಲೆ ಮೇಲೆ ಮಳೆಗರೆದ. ಅಕ್ಷತೆ ಪಾರ್ವತಿಯ ನೆತ್ತಿಯಿಂದ ಪಾದದತ್ತ ಉದುರುತ್ತಿತ್ತು. ಉದುರಿದ ಅಕ್ಷತೆ ನೆಲದಿಂದ ಚಿಮ್ಮುತ್ತಿತ್ತು. ಮಂಟಪದ ಕಂಬಕ್ಕೊರಗಿ ನಿಂತಿದ್ದ ಭಾಸ್ಕರ ಕುಸಿದುಬಿಟ್ಟ.., ಬೆರಣಿ ಭಾಸ್ಕರ ಭೂಮಿ ಬಿಟ್ಟ.

ತಾಯಿಯಿಂದ ಛಲದ ಬಳುವಳಿ.. ತಂದೆಯಿಂದ ರಕ್ತದ ಬಳುವಳಿ. ಕ್ಯಾನ್ಸರ್ ಭಾಸ್ಕರನನ್ನು ಹಿಸುಕಿ ಹಾಕಿತು. ಬೆರಣಿ ಭಾಸ್ಕರ ಕಟ್ಟಿಗೆಯ ರಾಶಿ ಮೇಲೆ ಮಲಗಿ ತಾನೇ ತಟ್ಟಿದ ಬೆರಣಿಯಿಂದ ಮುಖ ಮುಚ್ಚಿಸಿಕೊಂಡ.

                   ದೀಪಕ್ ಜೈನ್..

2 comments:

  1. ಸುಖ ಸಮೀಪಿಸಿತು ಎನ್ನುವಾಗಲೇ, ಕಥೆ ದುಃಖಾಂತವಾಯಿತಲ್ಲ!

    ReplyDelete
  2. ಓದಿಸಿಕೊಂಡು ಹೋಯಿತು. ಉತ್ತಮ ಕಥೆ, ಧನ್ಯವಾದಗಳು ದೀಪಕ್ ರಿಗೆ...

    ReplyDelete