Monday, October 13, 2014

ಕಾಮತರ ಮಸಾಲ್ಪುರಿ ಅಂಗಡಿಯಲ್ಲಿ

                 ನೀವು ಬೆಂಗಳೂರಿಗರು ನಮ್ಮೂರನ್ನು ಬಚ್ಚಲುಮನೆ ಅಂತ ಕರೆದ್ರೂ ಪರವಾಗಿಲ್ಲ. ನಮ್ಗೆ ನಮ್ಮೂರೇ ಚಂದ. ವರ್ಷದಲ್ಲಿ ಅರ್ಧ ವರ್ಷ ವರ್ಷಧಾರೆಯಾದ್ರೂ ನಮ್ಮವರಿಗೆ ಒಂಚೂರೂ ಮಂಡೆ ಬೆಚ್ಚ ಆಗೂದಿಲ್ಲ. ನಮ್ಗೆ ನಮ್ಮೂರೇ ಚಂದ.

                 ನೆತ್ತಿ ಸುಡೋ ಬೇಸಿಗೆಗಿಂತ ನಿತ್ಯ ಬಟ್ಟೆ ಒದ್ದೆ ಮಾಡಿಕೊಳ್ಳೋ ಮಳೆಗಾಲ ಕರಾವಳಿಗರಿಗೆ ಇಷ್ಟ. ಮಳೆಯನ್ನು ನಾವು ಖಂಡಿತಾ ಎಂಜಾಯ್ ಮಾಡ್ತೇವೆ. ನಿಮ್ಮ ಥರ ಯಾವತ್ತೂ ಮಳೆಗೆ ಹಿಡಿ ಶಾಪ ಹಾಕಲ್ಲ. ಬಾಯಿ ತಪ್ಪಿಯೂ ಬಯ್ಯಲ್ಲ.

                 ಆವತ್ತೊಂದು ಸಂಜೆ ಹಠಕ್ಕೆ ಬಿದ್ದವರ ಹಾಗೆ ಮಳೆ. ಯಪ್ಪಾ.., ಒಂದೊಂದು ಹನಿ ಕಲ್ಲೇಟಿನಷ್ಟೇ ಪ್ರಖರ. ಮಳೆ ಇಳೆಗೆ ಚುಂಬಿಸೋ ಬದಲು ಎತ್ತೆತ್ತಿ ಒದೆಯುತ್ತಿತ್ತು. ಅದೂ ಕರಾವಳಿಯ ಮಳೆ. ಗಾಳೆಯ ಸಾಥ್ಬೇರೆ. ಮತ್ತೆ ಅದನ್ನ ಎಕ್ಸ್ ಪ್ಲೈನ್ ಬೇಡ. ಓಯ್.., ಮಳೆಯಲ್ಲಿ ಬಾಯಿ ಚಪ್ಪರಿಕೆ ಸ್ವಲ್ಪ ಜಾಸ್ತಿ. ಮುರಿಯಲು ಚಕ್ಕುಲಿಯಿಲ್ಲದಿದ್ದರೆ ಅದೆಂಥ ಮಳೆಗಾಲ ಬಿಡಿ. ಮನಸ್ಸಾಯ್ತು ಬಿಸಿ ಬಿಸಿ ಏನಾದ್ರೂ ಬೇಕು ಅಂತ. ಮದುವೆ ಬೇರೆ ಆಗಿಲ್ಲ ನೋಡಿ.

                 ಕೊಡೆಯ ಕಡ್ಡಿ ಮುರಿಯುವಷ್ಟು ರಭಸ ನಮ್ಮೂರ ಮಳೆ. ಹೆಸರಿಗಷ್ಟೇ ಕೊಡೆ ಮೈಯೆಲ್ಲಾ ತೊಪ್ಪೆ. ಇಂಥಾ ಮಳೆಗೆ ನಮ್ಮೂರಿನ ಸಂಸ್ಕೃತ ಕಾಲೇಜು ಪಕ್ಕದ ಕಾಮತರಂಗಡಿ ಮಸಾಲಪುರಿ ಹೊಟ್ಟೆಗೆ ಬಿದ್ದರೆ ಗೂಡಂಗಡಿಯೇ ಸ್ವರ್ಗ. ಹೊರಟೇ ಬಿಟ್ಟೆ ರಥಬೀದಿ ಕಡೆಗೆ. ಇನ್ನೂ ಅರ್ಧಕಿಲೋಮೀಟರ್ ದೂರ ನಡೀಬೇಕು. ರಸ್ತೆ ಪಕ್ಕ ಪುರಸಭೆ ತೊಟ್ಟಿ - ಇಸ್ಮಾಯಿಲನ ಮೀನಿನ ಸೈಕಲ್ ಹಾದು ಹೋದ್ರೂ ನನ್ನ ಮೂಗಿಗೆ ಹೊಡೆಯುತ್ತಿದ್ದದ್ದು ಕಾಮತರ ಮಸಾಲಪುರಿ ಘಮ್.

                 ಉಫ್.., ನಿಜಕ್ಕೂ ಘಮ ಘಮಿಸೋದು ಅನ್ನೋ ಶಬ್ದ ಹುಟ್ಟಿರೋದೇ ಕಾಮತರ ಮಸಾಲಪುರಿಯಿಂದ. ದೊಡ್ಡಗಾತ್ರದ ಹಂಡೆಯಿಂದ ಕೊತ ಕೊತ ಶಬ್ದಕ್ಕೆ ಅರ್ಧ ಹೊಟ್ಟೆ ತುಂಬಿರುತ್ತೆ. ಸೀಮೆಯೆಣ್ಣೆಗೆ ಹಳ್ಳಿಯಲ್ಲಿ ಇಷ್ಟು ದೊಡ್ಡ ಕ್ಯೂ ಇರಲಿಕ್ಕಿಲ್ಲ. ಕಾಮತರ ಮಸಾಲಪುರಿಯ ಟೇಸ್ಟೇ ಅಂತದ್ದು.

                 ನಮಸ್ಕಾರ.. ಒಂದು ಮಸಾಲ್ಪುರಿ.. ಸ್ವೀಟ್ ಜಾಸ್ತಿ. ಬೌಲ್ ಕೈಗೆ ಬರೋ ಮೊದಲು ಐದಾರು ಬಾರಿ ಬಾಯಲ್ಲಿ ನೀರೂರಿತ್ತು. ಉಡುಪಿ ಶ್ರೀಕೃಷ್ಣನನ್ನು ನೋಡೋ ಐಡಿಯಾ ಹಾಕಿದ್ರೆ ಅದೇ ದಾರಿಯಲ್ಲಿ ಸಿಗೋ ಮಸಾಲ್ ಪುರಿಯ ದರ್ಶನ ಮಾಡ್ಕೊಂಡು ಹೋಗಿ. ಹೊರಗೆ ಥಂಡಿ ಮಳೆ. ಕೈಯ್ಯಲ್ಲಿ ಬಿಸಿ ಬಿಸಿ ಮಸಾಲ್ಪುರಿ. ಹೌದು.., ಮಳೆ ವಿದ್ ಮಸಾಲ್ಪುರಿ.

                 ಕಾಮತರೆ.., ಮಸಾಲ್ಪುರಿ.., ಸ್ವೀಟ್ ಜಾಸ್ತಿ ಅಂತ ಅವಳು ಪಕ್ಕ ಬಂದು ಕೂತಳು.

                    ಅವಳು ಬರೀ ಮಸಾಲ್ಪುರಿ ಅಂತ ಹೇಳುತ್ತಿದ್ದರೆ ನಾನತ್ತ ನೋಡುತ್ತಿರಲಿಲ್ಲ. ಸ್ವೀಟ್ ಜಾಸ್ತಿ ಅಂದದ್ದೇ ತಪ್ಪಾಯ್ತು. ಅತ್ತ.. ಇತ್ತ.. ಸುತ್ತ ಹುಡುಗೀರ ದಂಡೇ ಇತ್ತುಕತ್ತೆತ್ತಿ ನೋಡಿದ್ದು ಮಾತ್ರ ಅತ್ತ.., ಅವಳತ್ತ. ಸ್ವೀಟ್ ಜಾಸ್ತಿ ಮಿಕ್ಸಾಗಿದ್ದ ಮಸಾಲ್ಪುರಿಯ ಬೌಲ್ನತ್ತ. ಅವಳತ್ತ.

                 ಅವಳ ವಯಸ್ಸು 10 ಮತ್ತೊಂದು ಹತ್ತು. ಬ್ಯಾಕಿಂದ ಎಲ್ಲಾ ಹುಡುಗೀರು ಚೆನ್ನಾಗಿಯೇ ಕಾಣ್ತಾರಂತೆ. ಫ್ರಂಟಿಂದ ಕೆಲವರು ಮಾತ್ರ ಚೆನ್ನಾಗಿರ್ತಾರಂತೆ. ಸಿಂಪಲ್ಲಾಗಿ ಲವ್ ಮಾಡಿದವರ ಲಾಜಿಕ್ ಇದು. ಆದ್ರೆ ಈಕೆ ನನ್ಗೆ ಸೈಡಿಂದಾನೂ ಚೆನ್ನಾಗಿಯೇ ಕಂಡಳು.

                 ಮುಂಗಾರು ಮಳೆ ಸೈಡ್ ಎಫೆಕ್ಟ್ ಆಗಿರ್ಬೇಕು. ಮಳೆಯಲ್ಲಿ ಎಲ್ಲಾ ಹುಡುಗೀರು ಚೆನ್ನಾಗಿಯೇ ಕಾಣ್ತಾರೆ ಅಂತ ನಮ್ಮವರೊಬ್ರು ಹೇಳಿದ್ದು ನೆನಪಾಯ್ತು. ಮಸಾಲ್ಪುರಿ ಮುಗೀತು. 18 ಕೊಟ್ಟು ಅಲ್ಲಿಂದ ಹೊರಡಲು ಎದ್ದೆ.

                 ಸಿಕ್ಕಾಪಟ್ಟೆ ಮಳೆ. ರಸ್ತೆ ದಾಟಬೇಕು ನಾನು.., ಎಕ್ಸ್ಕ್ಯೂಸ್ಮೀ. ಅಂಗಡಿಗೆ ಹೋಗ್ಬೇಕಿತ್ತು.. ಅಂತ ಹೇಳಿ ಕೊಡೆ ಸೇರಿಕೊಂಡಳು. ಪಾಪ ಕೊಡೆಬಿಟ್ಟು ಬಂದಿರಬೇಕು. ಇಂಥಾ ಚಾನ್ಸ್ ಯಾವಾನಾದ್ರೂ ಮಿಸ್ ಮಾಡ್ತಾನಾ..? ಜೊತೆಯಾಗಿ ಅಂಗಡಿಯಿಂದ ಹೊರಬಂದದ್ದೇ ತಡ ಬರೀ ಛತ್ರಿ ಮಳೆ ಅದು. ಇನ್ನೂ ಜೋರಾಗಿ ಸುರಿಯೋದಾ..? ಹೊರಟೆವು.., ಅಷ್ಟೊತ್ತು ನನ್ನ ಬಲ ಕೈ- ಆಕೆಯ ಎಡಕೈ ಒದ್ದೆಯಾಗುತ್ತಿತ್ತು. ನಮ್ಮಿಬ್ಬರ ನಡುವೆ ಎರಡಿಂಚು ಗ್ಯಾಪ್ ಇತ್ತು.

                 ಸಿಕ್ಕಾಪಟ್ಟೆ ಮಳೆ ಬಿತ್ತು. ನನ್ನೆಡ ಕೈಗೆ ಅವಳ ಬಲ ಕೈ ಟಚ್ ಆಯ್ತು..., ಮೊದಲ ಟಚ್ ಗೆ ಶಾಕ್ ಹೊಡೀತು. 45 ಮೀಟರ್ನ ಜಂಕ್ಷನ್ ದಾಟಿ ಮತ್ತೆ ಆಕೆಯನ್ನು ಬಿಟ್ಟು ಹೋಗಬೇಕಲ್ಲ ಅಂತ ಒಂದು ಸಣ್ಣ ನೋವು ನನ್ನಲ್ಲಿತ್ತು. ಅವಳ ಮನಸಲ್ಲಿ ಏನಿತ್ತೋ ದೇವರಿಗೇ ಗೊತ್ತು. ಅವಳಿಗೆ ಬೇಕಾಗಿದ್ದ ಅಂಗಡಿ ಬಂತು. ಅಂಗಡಿಯವರೆಗೆ ಒಂಟಿಯಾಗಿದ್ದ ನನ್ನನ್ನು, ನನ್ನ ಮನಸ್ಸನ್ನು ಅರೆಕ್ಷಣ ಜಂಟಿ ಮಾಡಿ ಮತ್ತೆ ಒಂಟಿ ಮಾಡಿ ಹೊರಟಳು.

                    45 ಮೀಟರ್ ರಸ್ತೆ ದಾಟುವಾಗ ಕೊಡೆಯಲ್ಲಿ ಜೊತೆಯಾದವಳು 45 ವರ್ಷ ನನ್ನೊಂದಿಗೆ ಜೊತೆಯಾಗುತ್ತಾಳೆಂದು ನಾನಂದುಕೊಂಡಿರಲಿಲ್ಲ. ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತಂತೆ. ತುಂಬಾ ಜನ ಹೇಳ್ತಿರ್ತಾರೆ. ಯಾರು ಏನೇ ಹೇಳ್ಳಿ.., ನಮ್ಮದು ಮಾತ್ರ ಕಾಮತರ ಮಸಾಲ್ಪುರಿ ಅಂಗಡಿಯಲ್ಲಿ.

* - ದೀಪಕ್ ಜೈನ್

 

No comments:

Post a Comment