Wednesday, January 14, 2015

ಅಮ್ಮನ ಮದುವೆ.....

ಲೋ ಹುಡುಗಾ ಬಾರೋ ಇಲ್ಲಿ

ಏನ್ ಸ್ವಾಮಿ.. ಏನ್ ಬೇಕು

ಬೆರಣಿ ಮಾರೋನ್ ಹತ್ರ  ಬೇರೇನು ಕೇಳೋಕಾಗುತ್ತೆ? ಏನು ಅಂತೆ.. ೧೦ ಬೆರಣಿ ಕೊಡು..

ಸ್ವಾಮಿ..ಆಗಕಿಲ್ಲ.. ಮೊನ್ನೆದ್ದು ಬಾಕಿ ಕೊಟ್ಟು ಇವತ್ತು ತಗೊಳ್ಳಿ..

ಅಲೆಲೆಲೆ ಬಾಕಿ ಬೇಕೇನೋ ಕಂದ ನಿನ್ಗೆ..ನಾ ಕೊಡೋ ಬಾಕಿ ಹೊತ್ಕೊಂಡು ಹೋಗೋಕೆ ನಿನ್ ಕೈಲಿ ಆಗಲ್ಲ ಮರಿ, ನಿನ್ನ ಅಮ್ಮನ್ ಕಳ್ಸು.. ಎಲ್ಲಾ ಬಾಕಿನು ಚುಪ್ತಾ ಮಾಡ್ತೀನಿ.. ಅರೆರೆರೆ.. ಏನ್ ಚೆನ್ನಾಗಿದ್ಯೋ ಬೆರಣಿ.. ನಿಮ್ಮವ್ವನ್ ಮುಖ ಥರ ದುಂಡುಗಿದಯಲ್ಲೋ... ಹ್ಹಹ್ಹಹ್ಹ...... ಎನ್ನುತ್ತಾ ಕೈ ಬೆರಣಿಯ ಕೆನ್ನೆ ಚಿವುಟಿ ಮುರಿದಿತ್ತು.

         ಕಾಳಪ್ಪ ನಡುಬೀದಿಯಲ್ಲಿ ಹನುಮನನ್ನು  ರೀತಿ ಕಾಡುತ್ತಿದ್ದರೆ, ೧೫ರ ಹನುಮನನಿಗೆ ಎದುರು ನಿಂತಿದ್ದ ಪ್ರಾಣಿಯನ್ನು ನೆಲಕ್ಕಪ್ಪಳಿಸಿ ರಕ್ತ ಕಾರಿಸುವಂತಹ ಕೋಪ ಉಕ್ಕುತ್ತಿತ್ತು. ನಡುಬೀದಿಯಲ್ಲಿ ತನ್ನಮ್ಮನ ಹೆಸರಲ್ಲಿ ರಂಪ ಬೇಡವೆಂದು ಹೆಜ್ಜೆ ಹಿಂದಿಡುತ್ತಾನೆ. ಬಿರಬಿರನೆ ಹೆಜ್ಜೆ ಇಡುತ್ತಾ ಕಾಗೆ ಕೂತರೂ ಮುರಿದು ಬೀಳುವಂತಿದ್ದ ತನ್ನ ಮುರುಕಲು ಜೋಪಡಿಯ ಬಾಗಿಲು ಸರಿಸುತ್ತಾನೆ.

         ತೂತು ಬಿದ್ದ ಲೋಟಕ್ಕೆ ಅಂಟು ಹಚ್ಚುತ್ತಾ ಲೋಟದೊಡನೆ ಒಂದಿಷ್ಟು ದಿನಗಳ ನಂಟು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಳು ವೀಣಾ. ಮಗ ಬಂದ ಸದ್ದಿಗೆ ತಿರುಗಿ ಬಾಗಿಲ ಕಡೆ ನೋಡಿದಳು. ಗೋಡೆಗೆ ನೇತುಹಾಕಿದ್ದ ಒಡೆದ ಕನ್ನಡಿಯಲ್ಲಿ ತನ್ನ ಛಿದ್ರಗೊಂಡ ಮುಖ ನೋಡಿ ಜಿಗುಪ್ಸೆಯಾಯಿತು ಆಕೆಗೆ. ಯಾಕಾದರೂ ಪಾಪಿ ಹೊಟ್ಟೆಯಲ್ಲಿ ಹುಟ್ಟಿದೆಯೋ ಎಂದು ಮರುಗಿ ಸತ್ತಂತಾದಳು. ಮನಸ್ಸು ಮತ್ತೇ ಕರಾಳ ರಾತ್ರಿಯ ಮೆಲುಕು ಹಾಕಿತ್ತು.

         ಆಗ ವೀಣಾ ೧೫ರ ಪೋರಿ. ಅಜ್ಜಿಯೇ ಅವಳ ಪ್ರಪಂಚ. ಸಂಜೆ ಐದು ಆಗುವಷ್ಟರಲ್ಲಿ ಅಂಬಾ ಅನ್ನುತ್ತಿದ್ದ ಹಸು ಮಲ್ಲಿಯದ್ದು ಅಂದು ಗಂಟೆ ಏಳಾದರೂ ಸುಳಿವಿಲ್ಲ. ಅಂದು ಮನೆಯ ಹಸು ಮಲ್ಲಿಯದ್ದು ಕತ್ತಲಾದರೂ ಸುಳಿವಿಲ್ಲ. ಮಲ್ಲೀ...ಮಲ್ಲವ್ವಾ ಎನ್ನುತ್ತಾ ವೀಣಾ ಮನೆಯಿಂದ ಸುಮಾರು ದೂರ ಬಂದಾಗಿತ್ತು. ಕತ್ತಲಾಗಿತ್ತು. ಎಲ್ಲಿಂದಲೋ ರಾಕ್ಷಸ ಕೈಗಳೆರಡು ಮಲ್ಲಿಯನ್ನು ಆವರಿಸಿಕೊಂಡವು. ಬಾಯಿ-ಮೂಗು ಸ್ಥಬ್ದವಾದವು. ಉಟ್ಟಿದ್ದ ಬಟ್ಟೆಯೊಂದಿಗೆ ಮಲ್ಲಿಗೆ ಹುಡುಗಿಯ ಶೀಲ ಹರಿದಿತ್ತು. ನನಗೆ ಯಾರೋ ನೋವು ಮಾಡಿದರೆಂಬುದಷ್ಟನ್ನು ಬಿಟ್ಟರೆ ಮತ್ತಿನ್ನೇಯಾತಿತೆಂದೇ ಮುಗ್ಧ ಮನಸ್ಸಿಗೆ ಗೊತ್ತಾಗಲಿಲ್ಲ.
         ಅಷ್ಟರಲ್ಲಿ ತೇಲಿ ಬಂತು ಮಲ್ಲಿಯ ಗೆಜ್ಜೆ ಸದ್ದು. ಎಲ್ಲಿಗೆ ಹೋಗಬೇಕೆಂಬುದೇ ಮರೆತಂತಿದ್ದ ವೀಣಾ ಮಲ್ಲಿಯ ಹೆಜ್ಜೆಯನ್ನ ಹಿಂಬಾಲಿಸಿ ಮನೆ ಸೇರಿದಳು. ಅಜ್ಜಿಗೆ ಏನು ಹೇಳಲಿ ಎಂದೇ ತಿಳಿಯದೆ ಚಾಪೆಯಲ್ಲಿ ಬಿದ್ದುಕೊಂಡಳು. ಮೈಯಲ್ಲಿ ಅಲ್ಲಲ್ಲಿ ಮೂಡಿದ್ದ ಗಾಯದ ಗುರುತನ್ನು ಮರೆಯಾಗಿಸಲು ಮೈ ಕೈ ತುಂಬಾ ಹರಿದ ಕಂಬಳಿ ಸುತ್ತಿಕೊಂಡಳು.
         ತಿಂಗಳುಗಳೇ ಕಳೆದರೂ ವೀಣಾ ಬಾಯಿ ಬಿಡಲಿಲ್ಲ. ಆದರೆ ಪ್ರಕೃತಿ ಮಾತೆ ತನ್ನ ಕೆಲಸ ಮಾಡುವಲ್ಲಿ ಎಡವಲಿಲ್ಲ. ಆಡೋ ಕೂಸಿನ ಬಸಿರಲ್ಲಿ ಕಾಡೋ ಕೂಸಿನ ಉಸಿರು. ಅಜ್ಜಿಗೆ ವಿಷಯ ಗೊತ್ತಾದಾಗ ಕಾಲ ಮೀರಿ ಹೋಗಿತ್ತು. ಮಗುವನ್ನ ತೆಗೆದರೆ ಆಕೆಯ ಪ್ರಾಣಕ್ಕೆ ಅಪಾಯವಿದೆ ಎಂದಿತು ಮೆಡಿಕಲ್ ರಿಪೋರ್ಟ್. ಊರವರ ಎಲುಬಿಲ್ಲದ ನಾಲಗೆ, ಕರುಣೆಯಿಲ್ಲದ ಹೃದಯ ಸಾವಿರ ಪ್ರಶ್ನೆ ಕೇಳುತ್ತಿತ್ತು. ಸಹಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ತಿಂಗಳು ಒಂಭತ್ತಾಗುತ್ತಿತ್ತು.
ಗರ್ಭದೊಳಗಿನ ಕೂಸು ಇನ್ನೆಷ್ಟು ದಿನ ನನ್ನ ಮುಚ್ಚಿಡುವೆ ಎಂದು ಹೊರಬರುವ ಶತಪ್ರಯತ್ನ ನಡೆಸಿತ್ತು. ಅವಳ ರೋಧನ ಹೊರ ಜಗತ್ತಿಗೆ ಕೇಳದಂತ ಮಳೆ ಅಂದು. ಸೂಲಗಿತ್ತಿಯನ್ನು ಕರೆಯಲು ಹೋದ ಅಜ್ಜಿ ಸಿಡಿಲಿಗೆ ಬಲಿಯಾಗಿ ಇನ್ನಿಲ್ಲವಾದಳು. ಇದ್ದ ಒಂದು ಆಸರೆಯೂ ಇಲ್ಲವಾಗಿ ವೀಣಾ ಅಕ್ಷರಷಃ ಅನಾಥೆ ಈಗ. ತನಗೆ ತಾನೇ ಬಾಣಂತನ ಮುಗಿಸಿಕೊಂಡಳುಕರಿಮಣಿಯಿಲ್ಲದ ಕತ್ತನ್ನು ಕಾಮದ ಕಣ್ಣಲ್ಲಿ ಕಾಣುವ ಕೆಟ್ಟ ಕೀಚಕರ ಪ್ರಪಂಚದಲ್ಲಿ ತನ್ನನ್ನು ಉಳಿಸಿಕೊಳ್ಳಲು ಹದಿನಾರರ ಬಾಲೆ ಪಟ್ಟ ಪಾಡು ಹೇಳಿದರೆ ಮುಗಿಯದುಈಗ ಮಗ ಬೆಳೆದು ನಿಂತಿದ್ದಾನೆ. ಕೇರಿಯ ಮೂಲೆ ಮೂಲೆ ಸುತ್ತಿ ಸೆಗಣಿ ತಂದು ಬೆರಣಿ ತಟ್ಟುತ್ತಾನೆ. ಸಾವಿರ ಬಾರಿ ಅಪ್ಪ ಯಾರು ಎಂದು ಅಮ್ಮನಲ್ಲಿ ಪ್ರಶ್ನಿಸಿದ್ದಾನೆ. ಕೊನೆಗೊಂದು ದಿನ ವೀಣಾ ತಡೆಯಲಾರದೆ ತನ್ನ ಮಗನನ್ನು ಬಾಚಿ ತಬ್ಬಿ ತನ್ನೊಳಗೆ ೧೫ ವರ್ಷಗಳಿಂದ ಮುಚ್ಚಿಟ್ಟಿದ್ದ ಕರಾಳ ಸತ್ಯದ ಪರಿಚಯ ಮಾಡಿದಳು. ಮಗನ ಹೃದಯ ಇನ್ನಿಲ್ಲದಂತೆ ಮರುಗಿತ್ತು. ಅಂದಿನಿಂದ ಅವನಿಗೆ ಓರಗೆಯ ಮುತ್ತೈದೆಯರನ್ನು ಕಂಡಾಗ ಕರುಳು ಕತ್ತರಿಸಿದಂತಾಗುತ್ತದೆ. ಆವಾಗೆಲ್ಲಾ ಅವನ ಕಣ್ಣಿಗೆ ಅವನಮ್ಮ ಅಕ್ಷರಷಃ ವೀಣೆಯಂತೆ ಕಾಣುತ್ತಾಳೆ. ಆದರೆ ಅದನ್ನು ಮೀಟುವ, ಮಾಧುರ್ಯ ಹೊಮ್ಮಿಸುವ ಕೈ ಎಲ್ಲಿದೆಯೋ.. ಉತ್ತರವಿಲ್ಲ.

         ಒಂದು ದಿನ ತರಗತಿಯಲ್ಲಿ ಗುರುಗಳು ರಾಜಾರಾಮ್ ಮೋಹನ್ ರಾಯ್ ಬಗ್ಗೆ ವಿವರಿಸುತ್ತಿದ್ದಾಗ ಹನುಮನ ತಲೆಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಹೌದು.. ನಾನ್ಯಾಕೆ ನನ್ನ ಅಮ್ಮನಿಗೊಂದು ಮದುವೆ ಮಾಡಿಸಬಾರದು.. ಏನಾದರಾಗಲಿ ನನ್ನಮ್ಮನ ಮದುವೆ ಮಾಡಿಯೇ ತೀರುತ್ತೇನೆ.. ಅವಳಿಗೊಂದು ಜೋಡಿ ತಂದೇ ತರುತ್ತೇನೆ ಎಂದು ಕ್ಷಣವೇ ಮನೋಸಂಕಲ್ಪ ಮಾಡಿದ್ದ.. ಅಮ್ಮನ ಮದುವೆಗೆಂದು ದಿನಕ್ಕೆ ೨೦ ಹೆಚ್ವು ಬೆರಣಿ ತಟ್ಟಿದ. ಊರಿನ ದನಗಳಿಗೆ ಇನ್ನೂಹೆಚ್ಚು ಮೇವು ಸಿಗಲಿ, ಅವು ಚೆನ್ನಾಗಿ ತಿಂದು ಜಾಸ್ತಿ ಸೆಗಣಿ ಹಾಕಲಿ ಎಂದು ದೇವರನ್ನು ಬೇಡಿದ.

         ಆದರೆ ವರ ಯಾರು? ತನ್ನಮ್ನನಿಗೆ ಗಂಡನಾಗುವ ಗಂಡನ್ನು ಹನುಮ ಕಂಡಕಂಡಲ್ಲಿ ಹುಡುಕಿದ. ತನಗೆ ಗೊತ್ತಿರುವ ಮುಖಗಳಲ್ಲಿ ತನ್ನೊಂದಿಗೆ ಅತೀ ಆತ್ಮೀಯತೆಯಿಂದಿರುವ ಜೀವ ಯಾವುದಿದೆ ಎಂದು ಯೋಚಿಸಿದ. ಪಕ್ಕನೆ ಕಣ್ಣಮುಂದೆ ಹಾದುಹೋಗಿದ್ದು ಊರ ಮಸೀದಿಯ ಚಿತ್ರ.. ಅದರ ಪಕ್ಕದಲ್ಲಿ ಊರಲ್ಲೇ ಅತೀ ಕಡಿಮೆ ಬೆಲೆಗೆ ಕಬಾಬ್ ಮಾರುವ ಕಸುಬಿನ ಕರೀಂನ ಚಿತ್ರವೂ ಇತ್ತು.
ಅವನಿಗಿನ್ನೂ ಮದುವೆ ಆಗಿಲ್ಲ. ವಯಸ್ಸು ೪೫.
         ಹನುಮ ಅಮ್ಮನಿಗೆ ವಾರಕ್ಕೊಮ್ಮೆ ಕಬಾಬ್ ಕೊಂಡು ಹೋಗುವುದು ಅವನಿಂದಲೇ. ಕರೀಂನನ್ನು ಕಂಡರೆ ಹನುಮನಿಗೆ ಅದೇನೋ ಸೆಳೆತಅವನಿಗೂ ಅಷ್ಟೇ. ಇಂದೂ ಎಂದಿನಂತೆ ಕಬಾಬ್ ಪೊಟ್ಟಣ ಕಟ್ಟಿದ ಕೈ ಹನುಮನ ತಲೆಯನ್ನು ಸವರಿತ್ತು. ಇಂದೇಕೋ ಅತಿ ಭಾವುಕತೆಯಿಂದ ಹನುಮ ಕರೀಂನನ್ನು ಬಿಗಿದಪ್ಪಿಕೊಂಡು ಅವನ ಕಣ್ಣಲ್ಲಿ ಕಣ್ಣಿಟ್ಟು ಕೇಳಿಯೇಬಿಟ್ಟ.. “ನನಗೆ ಅಪ್ಪ ಆಗ್ತೀಯಾ” ಎಂದು. ಕರೀಂ ತಡವರಿಸಿದತನ್ನ ಕಡೆ ಒಂದೇ ಸಮನೆ ನೋಡುತ್ತಿದ್ದ ಹನುಮನ ಮುಖದ ಮೇಲೆ ಕರೀಂ ಕಣ್ಣೀರು ಪಟಪಟನೆ ಉದುರಿತ್ತು.  ಕಣ್ಣೀರು ವೀಣಾ ಬದುಕಿನ ಪನ್ನೀರಾಗಿತ್ತು.

         ಆದರೆ ಎಲ್ಲಾ ಇವರಂದುಕೊಂಡಂತೆ ನಡೆಯಲಿಲ್ಲ. ಇದು ಎರಡು ಬರಡು ಹೃದಯಗಳ ಮದುವೆ ಆಗಿರಲಿಲ್ಲ, ಎರಡು ಧರ್ಮಗಳ ಮದುವೆಯಾಗಿತ್ತು. ಸುತ್ತಲಿಂದಲೂ ಎಚ್ಚರಿಕೆಯ ಘಂಟೆ ಬಾರಿಸುತ್ತಿತ್ತು.
ಹನುಮ ಜಗ್ಗಲಿಲ್ಲ. ಲೋಕವೇ ಎದುರು ನಿಂತರೂ ಅಮ್ಮನಿಗೊಂದು ಸಂಗಾತಿಯನ್ನು ತಂದೇ ತರುವ ಮಗ ನಾನು ಎಂದು ಎದೆ ಉಬ್ಬಿಸಿ ನಿಂತವ ಮದುವೆ ಮಾಡಿಯೇಬಿಟ್ಟ. ಅಷ್ಟು ವಿರೋಧ ತೋರಿಸಿದ ಜನರ ಸುದ್ದಿಯೇ ಇಲ್ಲ ಇಂದು.
         ವೀಣಾ ಗಂಡನ ಮನೆ ಸೇರಿದಳು. ಹನುಮ ಅಮ್ಮನಿಲ್ಲದ ಅದೇ ಮುರುಕಲು ಮನೆಯಲ್ಲೇ ಉಳಿದ. ಅಪ್ಪ ಅಮ್ಮ ಎಷ್ಟೇ ಹೇಳಿದರೂ ಅವರೊಂದಿಗಿರದೆ ಒಬ್ಬಂಟಿಯಾಗಿದ್ದ. ತನ್ನ ಬೆರಣಿ ತಟ್ಡುವ ಕಾಯಕ ಮುಂದುವರಿಸಿದ.

         ಮದುವೆಯ ಮರುದಿನ. ಸುಡುಬಿಸಿಲಲ್ಲಿ ಬೆರಣಿ ಹೊತ್ತು ಬರುತ್ತಿದ್ದ ಹನುಮ.

ಲೋ ಹುಡುಗಾ... ಬಾರೋ ಇಲ್ಲಿ..

ಏನ್ ಸ್ವಾಮೀ.. ಎಷ್ಟು ಬೇಕು..

ಬೇಕಾಗಿರೋದು ನನಗಲ್ಲಪ್ಪ ನಿನಗೆ.
ನಿನಗಾಗಿ ಕಾಯುತ್ತಿದ್ದೇವೆ. ನಿನ್ನಪ್ಪ ಅಮ್ಮನ ಕೊಲೆಯಾಗಿದೆ. ಧರ್ಮ ಕಾಯಲು............ ಅವನು ಮುಗಿಸಿರಲಿಲ್ಲ. ಇನ್ನೂ ಆಲಿಸುವ ತಾಳ್ಮೆ ಹನುಮನಿಗಿರಲಿಲ್ಲ... ಕಾಲುಗಳು ನನ್ನವಲ್ಲ ಎಂಬಂತೆ ಆಸೆ ಬಿಟ್ಟು  ಅಮ್ಮಾ... ಎನ್ನುತ್ತಾ ಕರೀಂನ ಮನೆ ಕಡೆ ಓಡಿದ.

         ನಿನ್ನ ಬುಟ್ಟಿಯ ಬೆರಣಿ ಸಾಲದು ಹನುಮ...ಲೋಕದ ಜಾತಿಯ ಭೂತವ ಸುಡಲು..


ಪದ್ಮಿನಿ ಜೈನ್ ಎಸ್.

1 comment:

  1. ಮಾನವತೆ ಇಲ್ಲದ ಸಮಾಜಕ್ಕೆ ಹಿಡಿದ ಕನ್ನಡಿ!

    ReplyDelete