Wednesday, November 12, 2014

ನಾನು ಹಕ್ಕಿಯಾದರೆ.............

                 ನಮ್ಮದೊಂದು ಪುಟ್ಟ ಸಂಸಾರ. ನಮ್ಮನ್ನು ನೋಡಿ ನೀವೂ ಹೊಟ್ಟೆ ಉರ್ಕೊತೀರ.. ಗಿಣಿರಾಮನ ಸಂಸಾರ ಉರ್ಕೊಳೋ ಥರನಾನು ಆಕೆ.. ಆಕೆ ನಾನು.. ನಮ್ಮಿಬ್ಬರ ಪ್ರೀತಿಗೆ ಬಂದವ ಇವ. ಇವ್ನ ಹೆಸರು ಮಿನಿ ಮಿಂಚುಳ್ಳಿ.
                 ನಾನು ಮಿಂಚುಳ್ಳಿ. ಈಕೆ..? ಈಕೆಯೂ ಮಿಂಚುಳ್ಳಿ. ಮಿಂಚುಳ್ಳಿಗೇನು ಕೊಕ್ಕರೆ ಜೊತೆ ಲವ್ವಾಗುತ್ತಾ..?
                    ಮಿನಿ ಮಿಂಚುಳ್ಳಿ ಹುಟ್ಟೊ ಮೊದಲು ಮಲ್ಪೆ ನಮ್ಮಿಬ್ಬರ ಹಾಟ್ ಸ್ಪಾಟ್. ಕೆರೆಕಟ್ಟೆ ಸುತ್ತಾಡಿದ್ರೆ ಮೀನು ಸಿಗೋದು ಕಷ್ಟ. ಅದ್ಕೋಸ್ಕರ ನಾವು ನಿತ್ಯ ಹಾರುತ್ತಿದ್ದದ್ದು ಮಲ್ಪೆಗೆ. ಮೀನುಗಾರರು ಹಿಡಿಯೋ ಮೀನಿಗಾಗಿಯಲ್ಲ. ಫ್ರೆಶ್ ಫಿಶ್ ಗಾಗಿನಾನು ಮಿಂದೇಳಿ ಮೀನು ಹಿಡೀತಿದ್ರೆ ಆಕೆ ಗುರ್..ರ್ ... ಗಿಡುಗ ಬರ್ತಾನಾ ಅಂತ ಕಾಯ್ತಿದ್ಳು. ಆಕೆ ನೀರೊಳಕ್ಕೆ ಇಳಿದ್ರೆ ನಂದು ಕಾವಲು. ಸಿಕ್ಕ ಮೀನು ಬೈ ಟು. ಪ್ರಿಯತಮೆಯ ಎಂಜಲು ತಿನಿಸು ಬಲುರುಚಿ ಅಂತ ನಂಗೊತ್ತು. ಬೀಚ್ ಬದಿ ಆಕೆ ಕಚ್ಚಿದ ತಿನಿಸನ್ನು ಅವ ಚಪ್ಪರಿಸಿ ತಿಂತಿದ್ದ. ಇಂತಹ ಎಷ್ಟು ಜೋಡಿಗಳನ್ನು ನೋಡಿಲ್ಲ ನಾನು..? ಆದ್ರೆ ನನ್ನಾಕೆಗೆ ಎಂಜಲಾಗ್ತಿರಲಿಲ್ಲ. ಹುಡುಗೀರ ಥರಾನೇ...
                     ಆವತ್ತೊಂದಿನ ನನ್ನ ಮೀನಿನ ಬೇಟೆಗೆ ಹದ್ದಪ್ಪ ಅಡ್ಡಗಾಲಿಟ್ಟ.. ನನ್ನ ರೆಕ್ಕೆಗೆ ಅವ ಜೋರಾಗಿ ಪಟಿದ... ಒಂದು ವಾರ ಈಕೆಯೇ ನನಗಮ್ಮ. ನಾ ಗೂಡೊಳಗೆ ದಿನಪೂರ್ತಿ ಗುಮ್ಮ..
                     ಮಿರ ಮಿರ ಮಿಂಚೋ ನಮ್ಮನ ಕಂಡ್ರೆ ಎಲ್ರಿಗೂ ಹೊಟ್ಟೆ ಉರಿ.. ರೆಕ್ಕೆಗೆ ರೆಕ್ಕೆಯಂಟಿ.. ಕೊಕ್ಕಿಗೆ ಕೊಕ್ಕಂಟಿಕೊಂಡೇ ನಮ್ಮ ಜೀವನ. ತಂತಿಯ ಮೇಲೆ ಕೂತು ಇಳಿ ಸಂಜೆಯ ಬಾನು ನೋಡೋದಂದರೆ ನಮ್ಗೆ ಭಾರೀ ಖುಷಿ.
                 ಆವತ್ತೊಂದಿನ ಮುಗಿಲ ಮಧ್ಯೆ ಬೆಳ್ಳಕ್ಕಿಗಳು ತುಂಬು ಸಂಸಾರದಂತೆ ಒಂದಕ್ಕೊಂದರ ನಡುವೆ ಬೆಸೆದುಕೊಂಡು ಗೂಡಕಡೆ ಹಾರೂದ ನೋಡಿದೆವು. ಕಣ್ಣಲ್ಲಿ ಕಣ್ಣಿಟ್ಟು ನೋಡಿ ಗೂಡು ಸೇರಿದೆವು. ಅವತ್ತು ರಾತ್ರಿಯೆಲ್ಲಾ ನಿದ್ದೆಯಿಲ್ಲ.
                 ನಮಗೂ ನಮ್ಮಿಬ್ಬರ ಮುಖನೋಡಿ.. ದಿನಪೂರ್ತಿ ಅದೇ ಎರಡು ಮುಖನೋಡಿ ಸಾಕಾಗಿತ್ತು. ಆಗ ಬಂದವ ಮಿನಿ ಮಿಂಚುಳ್ಳಿ. ತಂತಿ ಮೇಲೆ ಬೆಳ್ಳಕ್ಕಿಗಳ ಸಾಲು ನೋಡೋಕೆ ಅವ್ನೂ ಬರ್ತಿದ್ದ. ನಾನೂ ಗುಂಪಲ್ಲಿ ಹಾರ್ಬೆಕಮ್ಮಾ... ಎಲ್ಲಾದ್ರು ದೂರ ಹೋಗ್ಬೇಕಮ್ಮಾ ಅಂತ ಇವಳನ್ನು ಕಾಡಿದ. ನಮ್ಗೂ ಬೋರಾಗಿತ್ತು. ನಮ್ಮೂರಿನ ಎಂಟತ್ತು ಕುಟುಂಬಗಳನ್ನು ಒಟ್ಟು ಮಾಡಿದೆವು.
                     ಇಪ್ಪತ್ತೈದು ಜನರ ಟೀಂ. ಒಟ್ಗಿಗೆ ಜೋರು ಚೀರಿ ಆಕಾಶದೆತ್ತರ ಹಾರಿದೆವು. ಫಸ್ಟ್ ಟೈಂ ನಾವು ಟೂರು ಹೊರಟಿದ್ವಿ. ಇಡೀ ಲೋಕದಲ್ಲೇ ಬರಿಗೈ ಟೂರು ನಮ್ಮದೇ ಇರ್ಬೇಕು. ಸಮುದ್ರದಾಚೆ ಹಾರಿದ್ವಿ. ಎಲ್ನೋಡಿದ್ರೂ ನೀರು. ನಮ್ಗೆಲ್ಲಾ ಡಬ್ ಡಬ್... ಉದ್ದ ಕೊಕ್ಕಿನ ಸೀನಿಯರ್ ನಮ್ಮ ಲೀಡರ್.
ಕಡಲ ಮಧ್ಯೆ ದೊಡ್ಡ ಬಂಡೆಯೇರಿ ಕುಳಿತೆವು. ದೂರದಲ್ಲೊಂದು ಬೋಟು ಎಲ್ರೂ ಕೈಲೇನೋ ಹಿಡ್ಕೊಂಡಿದ್ರು. ನಮ್ಮಕಡೆ ಗುರಿಯಿಟ್ಟರು. ೨೫ ಜನ ಇದೀವಿ.. ಹೆದರೋದಾ. ನಾವ್ ಏಳಲೇ ಇಲ್ಲ. ಅವರ ಕಡೆ ಗುರಾಯಿಸಿದೆವು. ತುಂಬಾ ಹತ್ತಿರಾದ್ರು ಅನ್ನೋವಷ್ಟರಲ್ಲಿ ಬುರ್.. ಅಂತ ಕಾಲ್ಕಿತ್ತೆವು.
ಮಿಂಚುಳ್ಳಿ ಜೀವಮಾನದಲ್ಲೇ ಇಷ್ಟು ದೊಡ್ಡ ಗುಂಪಲ್ಲಿ ಇದ್ದದ್ದು ಇದೇ ಫಸ್ಟ್ ಅನ್ಸುತ್ತೆ. ಮೂರು ದಿನ ಸುತ್ತಾಡಿ ದೂರದಲ್ಲಿರೋ ನಗರ ಸೇರಿದೆವು. ಸಮುದ್ರ ಕಿನಾರೆಯಲ್ಲಿ ಭಾರೀ ಜನ. ಏನೋ ಫಂಕ್ಷನ್ ಇರ್ಬೇಕು ಅಂತ ಹತ್ತಿರ ಹೋದ್ರೆ ನಮ್ಮಂತಹ ಮಿಂಚುಳ್ಳಿಯ ಗುಂಪೇ ಇದೆ.
                 ಸರ್... ಗಿರ್..  ಅಂತ ಸುತ್ತಮುತ್ತ ಓಡಿದ್ವಿ, ನೋಡಿದ್ವಿ. ನಮ್ಮಂತೆಯೇ... ಮಿಂಚುಳ್ಳಿಗಳ ಗುಂಪದು. ಬಿಲ್ಡಿಂಗಿನಷ್ಡು ದೊಡ್ಡ ಮಿಂಚುಳ್ಳಿಗಳು. ಆಗ ಗೊತ್ತಾಯ್ತು.. ಅದು ನಾವೇ.. ಮುಖ ಕೊಕ್ಕು.. ಕಣ್ಣು.. ಜೀವ ಎಲ್ಲವೂ ನಂದೇ.. ನಾವೇ..  ಬಂಡೆಯ ಮೇಲಿದ್ದಾಗ ನಮ್ಮ ಹತ್ತಿರ ಬಂದ ನಾಲ್ಕೈದು ಮಂದಿ ಫೋಟೋ ತೆಗೆದಿದ್ದರು.. ಗೊತಾಗಿಬಿಡ್ತು ನಮಗೆ.
                 ಆ ಟೋಪಿ ಹಾಕಿದ್ದ ಡುಮ್ಮನಿಗೆ ಭಾರೀ ಬಹುಮಾನವೂ ಸಿಕ್ಕಿರಬೇಕು. ಜನರಿಗೆ ನಮ್ಮ ಫೋಟೋ ತೋರಿಸಿ ಬೀಗುತ್ತಿದ್ದನಾವು ಮೀನು ಹಿಡಿಯಲು ಕೂರೋ ಮರಗಳನ್ನು ಕಡಿದ ಜನರು.. ನಮ್ಮ ಚಿತ್ರ ತೆಗೆದು ಹಣಾನೂ ಮಾಡ್ತಾರೆ. ಗೌರವನೂ ಪಡೀತಾನೆ ಅಂತ ನಮ್ಗೆ ಆಗ ಗೊತ್ತಾಯ್ತು.
                     ಮುಂದೆ ಹಾರಿ ಹೋದೆವು. ಆಶ್ಚರ್ಯವಾಯ್ತು. ಮತ್ತೊಂದು ಮಿಂಚುಳ್ಳಿ ಕಟ್ಟಡ. ಕಿಟಕಿಯಲ್ಲಿ ಕುಳಿತು ನೋಡಿದೆವು. ಅಲ್ಲೂ ಮನುಷ್ಯರು.. ಅಮಲೇರಿ ತೂರಾಡುತ್ತಿದ್ದರು. ರಸಹೀರಿ ರಾಕ್ಷಸರಾಗಿದ್ದರು. ಚಟಕ್ಕೂ ನಮ್ಮ ಫೋಟೋವನ್ನೇ ಉಪಯೋಗಿಸಿದ್ದರು. ಬಾಟಲಿ ಮೇಲೆ ಗೋಡೆಯ ಮೇಲೆ ನಾವೇ.. ಮನುಷ್ಯ ಜನ್ಮದ ಮೇಲೆ ಜಿಗುಪ್ಸೆ ಬಂತು.
ಈಕೆ ಅಂದೇ ಬಿಟ್ಟಳು... ಹೊರಡೋಣ... ನಮ್ಮ ಮನೆಗೆ. ಮಲ್ಪೆ ಕಡೆಗೆ. ಹೊರಟಿತು ಪಟಾಲಾಂ. ಸೇರಿತು ಗೂಡು. ಚದುರಿತು ಗುಂಪು.. ಮತ್ತೆ ನಾವೆಂದೂ ಒಂದಾಗಲೇ ಇಲ್ಲ. ಎಲ್ಲೋ ಕದ್ದುಮುಚ್ವಿ ನಾನು ಈಕೆ.. ಈಕೆ ಜೊತೆ ನಮ್ಮ ಮುದ್ದು ಕಂದ ಜೊತೆಯಾದರೆ ಮತ್ತೆ ಕಪ್ಪು ಯಂತ್ರ ನಮ್ಮ ಕಡೆ ಗುರಿಯಿಡುತ್ತಿತ್ತು. ವಾರ ಕಳೆದೋ.. ತಿಂಗಳು ಕಳೆದೋ ನಮ್ಮ ಚಿತ್ರ ನಮಗೇ ಕಾಣ ಸಿಗುತ್ತಿತ್ತು.
ಇವ್ರ ಸಹವಾಸ ಬೇಡಪ್ಪ ಅಂತ ನಾವು ದ್ವೀಪಕ್ಕೆ ಶಿಫ್ಟಾದೆವು. ಚರಿಪಿರಿಯಿಲ್ಲದ ಜೀವನ ನಡೆಸಿದೆವು.

* - ದೀಪಕ್ ಜೈನ್





No comments:

Post a Comment