Wednesday, November 12, 2014

ಮನ ಹಕ್ಕಿಯಾಗ ಬಯಸಿ .............

                    ಮನೆಯ ಮಂಚದಲ್ಲಿ ಕೂತು ಟಿ.ವಿ. ನೋಡುತ್ತಿದ್ದ. ಒಳಗಿದ್ದೇ ಹೊರಜಗತ್ತನ್ನು ನೋಡುವ ಒಂದು ಪರಿ ಇದು. ಇನ್ನು ಕತ್ತು ತಿರುಗಿಸಿದರೆ ಕಿಟಕಿ. ಅಲ್ಲಿ ಜಗತ್ತಿನ ಇನ್ನೊಂದು ಹೊರನೋಟ. ಎದುರು ಮನೆಯಲ್ಲಿ ಒಂದು ಸಂಪಿಗೆ ಮರ. ಅದರಲ್ಲೆರಡು ಮೈನಾ ಹಕ್ಕಿ. ದಿನಾ ಬೆಳಿಗ್ಗೆ ಒಂದು ಮಾಡುತ್ತಿದ್ದವು ತನ್ನೆರಡು ಮೈನಾ.
                   
                    ಆದರಿಂದು ಒಂದೇ ಹಕ್ಕಿ ಕಾಣುತ್ತಿತ್ತು ಎರಡು ಹಕ್ಕಿಯ ಸ್ವರ ಕೇಳುತ್ತಿತ್ತು. ಮತ್ತೆ ಒಂದಾಗಿರಬೇಕು ಅಂದುಕೊಂಡ. ಆದರೆ ಕೇಳುತ್ತಿದ್ದದ್ದು ಸುಖದ ಸ್ವರ ಅಲ್ಲ. ಬೊಬ್ಬಿಡುತ್ತಿತ್ತು.......! ನಾನು ಸಾಯುವುದನ್ನು ನೋಡುವ ಸಾಮರ್ಥ್ಯ ನಿನಗಿಲ್ಲ ಹಾರು..., ಹೋಗು.... ಎನ್ನುತ್ತಿತ್ತು ಒಂದು ಹಕ್ಕಿ. ನೀನಿಲ್ಲದೆ, ನಾನು ಬದುಕುವ ಕಷ್ಟವನ್ನು ನೀನು ಸಹಿಸಲಾರೆ ಎಂದು ಚೀರುತ್ತಿತ್ತು ಇನ್ನೊಂದು ಹಕ್ಕಿ.
                   
                    ಸಂಪಿಗೆ ಮರದ ಗೆಲ್ಲಿಂದ ಗೆಲ್ಲಿಗೆ ಹಾರಿ ಒದ್ದಾಡುತ್ತಿದ್ದ ಒಂದು ಮೈನಾ ಮಾತ್ರ ಕಾಣುತ್ತಿದೆ. ಕಾಣುತ್ತಿಲ್ಲ ಇನ್ನೊಂದು ಮೈನಾ. ಆದರೆ ಒಂದೇ ಇದೆ ಎಂದು ನಂಬುವುದಕ್ಕೆ ಯಾವ ಆದರವೂ ಉಳಿದಿಲ್ಲ. ಅಳುವ ಧ್ವನಿ ಎರಡಿದೆ. ಕಿವಿ ನಂಬಿದ್ದನ್ನು ಕಣ್ಣು ಒಪ್ಪುತ್ತಿಲ್ಲ. ಆಗಲೇ ಕಂಡಿದ್ದು ಆಗೊಮ್ಮೆ ಈಗೊಮ್ಮೆ ಅಲ್ಲಾಡುವ ಮರದ ಎಲೆಗಳು.
        
                 ಮಂಚದಿಂದ ಎದ್ದ. ಕಿಟಕಿ ಹತ್ತಿರದಲ್ಲೇ ಇದ್ದ ಬಾಗಿಲಿಂದ ಹೊರಬಂದ. ಹನ್ನೊಂದು ಮೆಟ್ಟಿಲನ್ನು ಮೂರೇ ಹೆಜ್ಜೆಯಲ್ಲಿ ಇಳಿದವ ಆರನೇ ಹೆಜ್ಜೆಯಲ್ಲಿ ಮರದ ಮಧ್ಯೆ ಏರಿದ್ದ. ಅಲ್ಲಾಡುತ್ತಿದ್ದ ಗೆಲ್ಲನ್ನು ಒತ್ತಿ ಹಿಡಿದ. ಹಾರಿ ಹೋದ ಗಾಳಿಪಟದ ತುಂಡು ದಾರದಲ್ಲಿ ಸಿಕ್ಕಿಕೊಂಡಿದ್ದ ಮೈನಾ ಹಕ್ಕಿಯನ್ನು ಹಿಡಿದುಕೊಂಡ. ದಾರ ಬಿಡಿಸಲಾರಾದಷ್ಟು ಸುತ್ತಿಕೊಂಡಿತ್ತು. ತನ್ನ ಬಾಯಿತೆರದು ಹಕ್ಕಿಯನ್ನು ಹತ್ತಿರ ತಂದ. ನುಂಗಿ ಬಿಡುತ್ತಾನೋ ಎಂಬ ಭಯದಿಂದ ಹಕ್ಕಿ ತನ್ನ ಜೀವದಾಸೆ ಬಿಟ್ಟಿತು. ಆದರೆ ಇವ ನುಂಗಿಲ್ಲ ಬದಲಿಗೆ ಕಚ್ಚಿದ. ಸುತ್ತಿಕೊಂಡಿದ್ದ ದಾರವನ್ನು ಕಚ್ಚಿ ತುಂಡುಮಾಡಿದ. ಮರದಿಂದ ಹಾರಿದ. ಕೆಳಗಿಳಿದವನೇ ಕಚ್ಚಿ ಕಚ್ಚಿ ಒಂದೊಂದೇ ದಾರವನ್ನು ಬಿಡಿಸಿದ. ಹಕ್ಕಿ ಇನ್ನೂ ಉಸಿರಾಡುತ್ತಿತ್ತುಕಾಲಿನಲ್ಲಿ ಚೂರು ನಮ್ಮಂತೆಯೇ ಕೆಂಪು ಬಣ್ಣದ ರಕ್ತ ಹರಿಯುತ್ತಿತ್ತು. ಮೆಲ್ಲನೆ ಕೈಯನ್ನು ಸಡಿಲಿಸಿದ. ಹಕ್ಕಿ ಯಾಕೋ ಅಲ್ಲಾಡಲಿಲ್ಲ, ಉಸಿರಾಡುತ್ತಿತ್ತು. ಇದನ್ನೆಲ್ಲಾ ನೋಡುತ್ತಿದ್ದ ಜೊತೆ ಹಕ್ಕಿ ಇವನ ಗೆಲ್ಲಿಗೆ ಬಂತು. ಕೈಯಲ್ಲಿದ್ದ ಹಕ್ಕಿ ಒಂದುಕ್ಷಣ ಮರದಲ್ಲಿದ್ದ ಹಕ್ಕಿಯನ್ನು ನೋಡಿತು. ಮರುಕ್ಷಣ ಕೈ ಖಾಲಿಯಾಯ್ತು. ಕೈಯಲ್ಲಿದ್ದ ಹಕ್ಕಿ ಮರದಲ್ಲಿದ್ದ ಹಕ್ಕಿಯ ಜೊತೆ ಕೂತಿತ್ತು. ಕೊಕ್ಕಿಗೆ ಕೊಕ್ಕು ಮುಟ್ಟಿಸಿ ತಾ ನಡುಗದೆ ಎದೆ ನಡುಗದಂತೆ ಪರಸ್ಪರ ಒತ್ತಿ ಹಿಡಿದಂತಿತ್ತು. ಸುಖದ ಘಳಿಗೆಯನ್ನು ನೋಡಿದ ಹುಡುಗ ತನ್ನ ಬಲದ ಕಾಲನ್ನು ಬಲಕ್ಕೆ ತಿರುಗಿಸಿದ. ಹನ್ನೊಂದು ಮೆಟ್ಟಿಲಲ್ಲಿ ಇಪ್ಪತ್ತೆರಡು ಹೆಜ್ಜೆಯನ್ನಿಟ್ಟು ಮೇಲೇರಿದ. ಮನೆ ಸೇರಿದ ಟಿ.ವಿ. ಬಂದ್ ಮಾಡಿದ. ಕತ್ತು ತಿರುಗಿಸಿದ. ಕಿಟಕಿಯಲ್ಲಿ ಮರ ಕಾಣಲಿಲ್ಲ. ಮರಕ್ಕೆ ಅಡ್ಡವಾಗಿ ಎರಡು ಮೈನಾ ಹಕ್ಕಿ ಬಂದು ಕಿಟಕಿಯಲ್ಲೇ ಕೂತಿತ್ತು. ಅದೇ, ಒಂದರ ಕಾಲಲ್ಲಿ ಮನುಷ್ಯರ ರಕ್ತದ ಬಣ್ಣದ ಕೆಂಪು ರಕ್ತವೇ ಹರಿಯುತ್ತಿತ್ತು. ಇನ್ನೊಂದು ಹಕ್ಕಿಯ ಕಣ್ಣಲ್ಲಿ ಬಣ್ಣ ತುಂಬಲಾರದ ಕಣ್ಣೀರು ಹರಿಯುತ್ತಿತ್ತು. ತಟ್ಟೆಯಲ್ಲಿ ನೀರಿಟ್ಟ. ಹತ್ತಿರ ಬಂದ ಹಕ್ಕಿ ತಲೆತಗ್ಗಿಸಿ ನೀರು ಕುಡಿದವು. ತಲೆ ಎತ್ತಿ ಹುಡುಗನನ್ನು ನೋಡಿ ಮಾತಾಡದೇ ಮಾತಾಡಿದವು. ಹುಡುಗನೂ ಮರು ಮಾತಾಡಿದ. ಮರುದಿನ ಮತ್ತೆ ಬಂದವು... ನೀರು ಕುಡಿದವು... ಮಾತಾಡಿದವು. ಮತ್ತೆ ನಾಳೆ ಬರುವೆವು ಎಂದು ಹಾರಿಹೋದವು. ಹಕ್ಕಿಗಳು ಕೂಡ ಒಂದೊಂದು ಸಲ ಮನುಷ್ಯರನ್ನು ನಂಬುತ್ತವೆ ಆಗ ಮನುಷ್ಯ ಸ್ವತಃ ಹಕ್ಕಿಯಾಗತ್ತಾನೆ. ರೆಕ್ಕೆ ಬಿಚ್ಚಿ ಹಾರ ಬಯಸುತ್ತಾನೆ.

* - ಸುಧಾಕರ ಜೈನ್
                              ಹೊಸಬೆಟ್ಟು ಗುತ್ತು.






1 comment:

  1. Interesting. Keep it up. The last two lines are good ಹಕ್ಕಿಗಳು ಕೂಡ ಒಂದೋಂದು ಸಲ ಮನುಷ್ಯರನ್ನು ನಂಬುತ್ತವೆ ಆಗ ಮನುಷ್ಯ ಸ್ವತಃ ಹಕ್ಕಿಯಾಗತ್ತಾನೆ. ರೆಕ್ಕೆ ಬಿಚ್ಚಿ ಹಾರ ಬಯಸುತ್ತಾನೆ.

    ReplyDelete