Wednesday, November 12, 2014

★ಪ್ರಾಣ ಪಕ್ಷಿ★

                    ನಮ್ಮನೆ ಮುಂದಿರುವ ಒಂದು ದೊಡ್ಡ ಮರದಲ್ಲಿ ಮರೆಯಾಗಲು ದಿನ ಜೋಡಿ ಹಕ್ಕಿಗಳು ಪಡುತ್ತಿದ್ದ ಪರಿಶ್ರಮವನ್ನು ನಾನೆಂದೂ ಮರೆಯಲಾರೆ.. ಮರದ ಹತ್ತಿರ ಹೋಗಿ ಗಂಡು ಹಕ್ಕಿ  ತನ್ನ ಚೂಪಾದ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಮರವ ಕೊರೆದು ತನ್ನ ಕೊಕ್ಕು ಒಳಹೊಕ್ಕುವಷ್ಟು ಆಳ, ತನ್ನ ಶರೀರ ಒಳ ಹೋಗುವಷ್ಟು ಅಗಲದಿ ಮನೆಯ ಮಾಡುತ್ತಿತ್ತು.. ಅದೇ ಮರದ ರೆಂಬೆಯಲ್ಲಿ ಕೂತು ಇನಿಯನ ಶ್ರಮವನ್ನು ಹೆಣ್ಣುಹಕ್ಕಿ ನೋಡುತ್ತಿತ್ತು.. ಸುಸ್ತಾದಾಗ ಗಂಡು ಹಕ್ಕಿ ತನ್ನ ಮಡದಿ ಕೂತಿದ್ದ ರೆಂಬೆಯಲ್ಲಿ ವಿಶ್ರಾಂತಿಗೆಂದು ಕೂತಾಗ ಹೆಣ್ಣುಹಕ್ಕಿ ತನ್ನ ಕೊಕ್ಕಿನಿಂದ ಮುದ್ದಿಸಿ, ಇನಿಯನಿಗೆ ವಿಶ್ರಾಂತಿಸಲು ಹೇಳಿ ಕೊರೆದು ಮನೆಯ ಮಾಡುವ ಕೆಲಸವನ್ನು ತಾನು ಮುಂದುವರಿಸುತ್ತಿತ್ತು.. ತುಂಬಾ ಶಿಸ್ತಿನಿಂದ ಶ್ರಮವಹಿಸಿ ಗೂಡು ಕಟ್ಟುತ್ತಿದ್ದ ಜೋಡಿ ಹಕ್ಕಿಗಳು ಅಷ್ಟೇ ಪ್ರೀತಿಯಿಂದ ಸರಸವಾಡುತ್ತಿದ್ದವು.. ಮರುದಿನ ಪುನಃ ಕೊರೆಯಲು ಶುರುಮಾಡಿದವು.. ತಮ್ಮ ತಲೆಯ ಭಾಗ ತೂರಿಸಬಹುದಾದಷ್ಟು ಜಾಗವಾಯಿತು.. ಮಾರನೆ ದಿನ ಅಷ್ಟೇ ಉತ್ಸಾಹದಿಂದ ಯಾವ ಮಟ್ಟದಲ್ಲಿ ಕೊರೆಯುತ್ತಿದ್ದವು ಅಂದರೆ ನಾನು ಅಡುಗೆ ಮನೆಗೆ ಹೋಗಿ ದೋಸೆ ತಿಂದು ಬರುವಷ್ಟರಲ್ಲಿ ಅವುಗಳ ಪುಕ್ಕ ಮಾತ್ರ ಗೂಡಿನಿಂದ ಹೊರಗೆ ಕಾಣುತ್ತಿತ್ತು.. ದೇಹ ಒಳಗಡೆ ಮರೆಯಾಗಿತ್ತು.. ನಾನು ನೋಡುತ್ತಿದ್ದಂತೆಯೇ ಮೆಲ್ಲನೆ ದೇಹವನ್ನು ತಿರುಗಿಸಿ ತಮ್ಮ ತಲೆಯನ್ನು ಹೊರಹಾಕಿ ತಾವು ನಿರ್ಮಿಸಿದ ಪ್ರಪಂಚದೊಳಗಿಂದ, ಹೊರಪ್ರಪಂಚವನ್ನು ಹೆಮ್ಮೆಯಿಂದ ನೋಡುತ್ತಿತ್ತು...

                    ಗೂಡು ಕಟ್ಟಿದ ಖುಷಿಯಲ್ಲಿ ಜೋಡಿಹಕ್ಕಿಗಳು ಪ್ರತಿದಿನವೂ ಗೂಡಿನಲ್ಲಿ ಇದ್ದು ಹೆಮ್ಮೆಯಿಂದ ಸಂಸಾರ ನಡೆಸುತ್ತಿದ್ದವು.. ಸರಸ ಸಲ್ಲಾಪಗಳನ್ನು ನೋಡೋದರಲ್ಲಿಯೂ ಏನೋ ಒಂದು ಮಜಾ ಇತ್ತು... ಎಷ್ಟು ಸುಂದರವಾದ ಬದುಕು ಅಲ್ವಾ.. ಯಾವ ಬಂಧನವೂ ಇಲ್ಲ, ಯಾರ ನಿಂದನೆಯೂ ಇಲ್ಲ, ಹೊಟ್ಟೆಕಿಚ್ಚು ಅನ್ನುವ ಪದದ ಅರ್ಥಾನೇ ಗೊತ್ತಿಲ್ಲ.. ಸ್ವಾವಲಂಬಿಯಾಗಿ ಬದುಕಿ, ಆಕಾಶದೆತ್ತರಕ್ಕೆ ಮನಬಂದಾಗ ಹಾರುವ ಹಕ್ಕಿ ನಾನೂ ಆಗಬೇಕಿತ್ತು ಅಂತ ಅವೆಷ್ಟೋ ಬಾರಿ ನನ್ನನ್ನು ನಾನೇ ಹೊಸ ಕನಸುಗಳತ್ತ ಕೊಂಡೊಯ್ಯುತ್ತಿರುತ್ತೇನೆ...

                 ಈ ಜೋಡಿ ಹಕ್ಕಿಗಳು ನಾ ನಿನ್ನ ಬಿಡಲಾರೆ ಶೈಲಿಯಲ್ಲಿ ಮುದ್ದು ಮಾಡುತ್ತಾ, ಸದ್ದಿಲ್ಲದೆ ತುಂಟ ಮುನಿಸು ತೋರಿಸುತ್ತಾ, ಎರಡೇ ನಿಮಿಷಗಳಲ್ಲಿ ಮತ್ತೆ ಒಂದಾಗಿ ಹಾರುತ್ತಾ ಇರೋದನ್ನು ನೋಡಿ ನಾನಂತು ಯಾವಗ್ಲೂ ಆದರ್ಶ ದಂಪತಿಗಳನ್ನು ನೋಡುವುದೇ ನನ್ನ ದಿನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದೆ...

                     ಸ್ವಲ್ಪ ದಿನಗಳು ಉರುಳಿದವು.. ಯಾವತ್ತೂ ಒಟ್ಟಿಗೆ ಹಾರಾಡುತ್ತಿದ್ದ ಹಕ್ಕಿಗಳು ಇಂದು ಮಾತ್ರ ಒಂಟಿಯಾಗಿ ಗಂಡು ಹಕ್ಕಿ ಹಾರಾಡುತ್ತಿದೆ.. ಹೆಣ್ಣು ಹಕ್ಕಿಗೆ ಏನಾಗಿರಬಹುದು? ಕಾಲುಗಳಿಗೆ ಪೆಟ್ಟಾಗಿರಬಹುದೇ ಅಂದುಕೊಂಡೆ.. ಗೂಡಿನತ್ತ ಇಣುಕಿ ನೋಡಿದೆ.. ತಲೆ ಮಾತ್ರ ಹೊರಪ್ರಪಂಚವನ್ನು ನೋಡುತ್ತಿತ್ತು, ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಕಿಟಕಿಯಿಂದ ಹೊರಜಗತ್ತನ್ನು ನೋಡುತ್ತಿದ್ದಂತೆ.. ಏನೋ ಆಗಿದೆ ಅಂತ ತಿಳಿಯಿತು ಆದ್ರೆ ಏನು ಅನ್ನೋದು ತಿಳಿಬೇಕಾದ್ರೆ ಪುಟ್ಟ ಎರಡು ಹಕ್ಕಿಗಳ ತಲೆಯೂ ನನ್ನ ಕಣ್ಣುಗಳಿಗೆ ಗೋಚರವಾಗಬೇಕಾಗಿ ಬಂತು.. ಇಷ್ಟುದಿನ ಹೆಣ್ಣು ಹಕ್ಕಿ ಗೂಡಿನಲ್ಲಿ ರೆಸ್ಟ್ ಮಾಡ್ತಾ ಇರುತ್ತಿತ್ತು, ಯಾಕಂದರೆ ಅದು ಗರ್ಭಿಣಿಯಾಗಿತ್ತುಈಗ ಬಾಣಂತಿ.. ನಮ್ಮಲ್ಲಿ ಮನುಷ್ಯರಲ್ಲಿ ಹೆರಿಗೆ ನೋವಿನ ನಂತರ ಮಗುವಿನ ಮುದ್ದು ಮುಖ ನೋಡುತ್ತಾ, ಮಗುವಿನೊಡನೆ ಅರಿಯಲಾರದ ಭಾಷೆಯಲ್ಲಿ ಮಾತಾಡುತ್ತಾ ಬಾಣಂತಿತನದ ಸುಖ ಪಡೆಯುತ್ತಾರೆ. ಆದರೆ ಪಾಪ ಹಕ್ಕಿಗಳು ಹೆರುವುದೆಂದರೆ ಅದು ಮೊಟ್ಟೆಯನ್ನಿಡೋದು, ಅದು ಮಾತಾಡಲ್ವೇ..........!  ತಕ್ಷಣ ಮಗು ಮುಖ ನೋಡಿ ನೋವು ಮರೆಯೋ ಭಾಗ್ಯವಿಲ್ವೇ.....! ಜೀವವನ್ನ ತನ್ನೊಳಗೆ ಬಚ್ಚಿಟ್ಟು ಗರ್ಭದಿಂದ ಹೊರಬಂದ ಇನ್ನೊಂದು ಗರ್ಭವಾದ ನಿರ್ಜೀವ ಮೊಟ್ಟೆಗೆ ತನ್ನೊಡಲ ಬಿಸಿಯ ಬಸಿದು ಒಳಗಿರುವ ಜೀವವನ್ನು ಲೋಕಾರ್ಪಣೆಯ ಕ್ಷಣಕ್ಕೆ ಕಾಯುವುದರಲ್ಲೇ ಒಂದರ್ಧ ಬಾಣಂತಿತನ ಕಳೆದೇ ಹೋಗುತ್ತದೆ. ಅಂತೂ ಇಂತೂ ಎರಡು ಪುಟ್ಟ ಹಕ್ಕಿಗಳು ಸ್ವಲ್ಪ ಸ್ವಲ್ಪವೇ ಮೊಟ್ಟೆಯೊಡೆದು ಹೊಸ ಪ್ರಪಂಚಕ್ಕೆ ಕಾಲಿಟ್ಟವು.

                    ಕಂದಮ್ಮಗಳಿಗೆ ಆಹಾರ ತರಬೇಕಾದ ಜವಾಬ್ದಾರಿ ಅಪ್ಪನದ್ದು ಅಲ್ವೇ... ಗಂಡು ಹಕ್ಕಿ ಆಹಾರ ತರಲೆಂದು ತನ್ನ ಕಂದಮ್ಮಗಳಿಗೆ ಮುತ್ತನ್ನಿಟ್ಟು ಹೊರಟೇಬಿಟ್ಟಿತು.. ಬಾಣಂತಿ ಹಕ್ಕಿ ಇಷ್ಟು ದಿನಗಳ ವಿಶ್ರಾಂತಿಯಿಂದ ಬೇಸತ್ತು ಗಾಳಿ ಸೇವನೆಗೆಂದು ವಿಹರಿಸುವ ಸಲುವಾಗಿ ಗೂಡಿನ ಸುತ್ತ ಪ್ರದಕ್ಷಿಣೆ ಹಾಕುತ್ತಿತ್ತು.. ಗೂಡಿನಿಂದ ದೂರ ವಿಹರಿಸಲು ಮನಸ್ಸಿರಲಿಲ್ಲ.. ಯಾಕಂದ್ರೆ ಅದರ ಪಾಲಿನ ದೇವರು ಒಳಗೆ ಹಾಯಾಗಿ ನಿದ್ದೆ ಮಾಡುತ್ತಿದ್ದವು..

                     ವಿಹರಿಸುತ್ತಿದ್ದ ಬಾಣಂತಿ ಹಕ್ಕಿಯ ಕಣ್ಣಿಗೆ ಒಮ್ಮೆಲೇ ಗೋಚರವಾಗಿದ್ದುಗೂಡಿನತ್ತ ಧಾವಿಸುತ್ತಿರುವ, ಹಸಿವಿನ ಬೇಗೆಯಲ್ಲಿ  ಮರವೇರುತ್ತಿರುವ ಉದ್ದನೆಯ ಹಾವು.... ಅಯ್ಯೋ ಗಂಡನೂ ಇಲ್ಲದ ಹೊತ್ತಲ್ಲಿ ತಾನೇನು ಮಾಡಲಿ ಎಂದು ಗೊತ್ತಾಗದೆ, “ದಯವಿಟ್ಟು ನಿನ್ನ ಹಸಿದ ಹೊಟ್ಟೆಗೆ ನನ್ನ ಕಂದಮ್ಮಗಳನ್ನು ಆಹಾರವಾಗಿಸಬೇಡ" ಎಂದು ಗೋಗರೆದು ಅಳುತ್ತಿದ್ದ ಹಕ್ಕಿಯ ನೋವು ಕೇಳಿ ಒಳಗಿದ್ದ ನಾನು ಹೊರಗೆ ಓಡಿಬಂದೆ.. ಕ್ರೂರಿ ಹಾವಿಗೆ ಕಲ್ಲೆಸೆಯಬೇಕೆಂದು ಪಕ್ಕದಲ್ಲೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡೆ.. ನಡುಗುತ್ತಿರುವ ಕೈಯಿಂದ ಕಲ್ಲೆಸೆದುಬಿಟ್ಟೆ. ನನ್ನ ಗುರಿ ತಪ್ಪಿಹೋಗಿತ್ತು. ಹಾವಿಗೆ ಕಲ್ಲು ತಾಗಲಿಲ್ಲ, ಆದರೆ ತನ್ನ ಆಹಾರದತ್ತ ತಲುಪುವಲ್ಲಿ ಯಾರೋ ಪ್ರತಿಭಟಿಸುತ್ತಿದ್ದಾರೆ ಎಂದು ಅದರ ಅರಿವಿಗೆ ಬಂದು ತನ್ನ ವೇಗವನ್ನು ಹೆಚ್ಚಿಸಿತು.. ನಾನು ಕಲ್ಲೆಸೆಯದೇ ಇರುತ್ತಿದ್ದರೆ ಒಂದರೆ ನಿಮಿಷವಾದರೂ ಪುಟ್ಟ ಕಂದಮ್ಮಗಳು ಹೆಚ್ಚು ಬದುಕುತ್ತಿತ್ತೋ ಏನೋ... ಏನೂ ತೋಚದಂತಾಯಿತು.. ಸರಿ, ಬೊಬ್ಬೆ ಹಾಕಿ, ಕಿರುಚಿ ಹಾವನ್ನು ಓಡಿಸುವೆ ಎಂದು ನಿರ್ಧರಿಸಿದೆ.. ಬಾಣಂತಿಯ ನೋವಿನ ಅಳಲಿನ ನಡುವೆ ನನ್ನ ಧ್ವನಿ ಕ್ಷೀಣವಾಗಿತ್ತು..
                 ಅಂದು ಮರವನ್ನೇ ಕುಕ್ಕಿ ಕೊರೆದು ಗೂಡು ಕಟ್ಟಿದ ಹಕ್ಕಿ ಇಂದು ಹಾವನ್ನು ಕುಕ್ಕಲಾರಳೇ..? ಇಲ್ಲ, ಅಷ್ಟು ಶಕ್ತಿ ಬಾಣಂತಿ ತಾಯಿಗೆ ಇರಲಿಲ್ಲ.. ತನ್ನ ಹಾಗೂ ತನ್ನ ಇನಿಯನ ಪ್ರೀತಿಯ ಕುರುಹುಗಳಾಗಿರುವ ಮುಗ್ಧ ಕಂದಮ್ಮಗಳ ನಿದ್ದೆ ಶಾಶ್ವತವಾಗಲಿದೆ ಅನ್ನುವ ಸತ್ಯ ಹತ್ತಿರವಾಗುತ್ತಿದ್ದಂತೆ ಕುಗ್ಗತೊಡಗಿತು ತಾಯಿ ಹೃದಯ... ಸತ್ಯವನ್ನು ಎದುರಿಸಬಲ್ಲೆ ಎಂಬ ಧೈರ್ಯ ತಾಳಿ ಕುಕ್ಕುತ್ತೇನೆ ಎಂದು ಹೊರಡುವಷ್ಟರಲ್ಲಿ, ಹಾವಿನ ಹಸಿದ ಬಾಯಿಯೊಳಗೆ ಪುಟ್ಟ ಕಂದಮ್ಮಗಳ ಕಣ್ಣುಗಳು ತಾಯಿಗೆ ಅಂತಿಮ ವಿದಾಯ ಹೇಳುತ್ತಿತ್ತು.. ಇನ್ನೂ ರಕ್ಕೆ ಬಿಚ್ಚಿ ಹಾರಲು ಕಲಿವ ಮೊದಲೇ ಪಕ್ಷಿಯ ಪ್ರಾಣಪಕ್ಷಿಯೇ ಹಾರಿ ಹೋಯ್ತು.

                 ಹೊಟ್ಟೆ ತುಂಬಿಸಿಕೊಂಡ ಹಾವು ಭಾರವಾದ ಹೊಟ್ಟೆಯಿಂದ ಮರದಿಂದ ಇಳಿದು ಖಳನಾಯಕನಂತೆ ರಾಜಾರೋಷವಾಗಿ  ಹೊರಟೇಬಿಟ್ಟಿತು..

                 ಕೆಲವೇ ಕ್ಷಣಗಳಲ್ಲಿ ಗಂಡು ಹಕ್ಕಿ ಆಹಾರದೊಂದಿಗೆ ಗೂಡಿನ ಬಳಿ ಬಂತು.. ದುಃಖದಿಂದ ಕುಗ್ಗಿ ಹೋಗಿದ್ದ ಬಾಣಂತಿ ಹಕ್ಕಿ, ಅಪರಾಧ ಭಾವದಿ ಕಳೆದುಕೊಂಡ ಬದುಕನ್ನು ಹೇಳಲೂ ಆಗದೆ ಒಂದೇ ಸಲ ಜೋರಾಗಿ ಚೀರಿ ಗಂಡನ ಬಳಿ ಬಂದು ಕೊಕ್ಕಿಗೊಂದು ಮುತ್ತ ಕೊಟ್ಟು ಗಂಡ ಬರುವವರೆಗೆ ಉಳಿಸಿಕೊಂಡಿದ್ದ ತನ್ನ ಪ್ರಾಣವನ್ನು ದೊಪ್ಪನೆ ಮರದಿಂದ ಕೆಳಗೆ ಬಿದ್ದು ಗಂಡನ ಒಂಟಿ ಮಾಡಿ ಸತ್ತೇ ಹೋಯ್ತು......

                 ಅಷ್ಟು ಪರಿಶ್ರಮದಿಂದ ಹಂತ ಹಂತವಾಗಿ ಮರವ ಕೊರೆದು ಗೂಡು ಕಟ್ಟುವ ಸಾಮರ್ಥ್ಯ ಹಕ್ಕಿಗೆ ಕೊಟ್ಟ ದೇವರು, ಗೂಡಿಗೊಂದು ಬಾಗಿಲ ಮಾಡುವ ಸಾಮರ್ಥ್ಯವನ್ನೂ ಕೊಟ್ಟಿರುತ್ತಿದ್ದರೆ,.... ಇಂದು ಪುಟ್ಟ ಸಂಸಾರ ಹಾಯಾಗಿ ಆಕಾಶದೆತ್ತರಕ್ಕೆ ಹಾರುತ್ತಿತ್ತು....

                   

* - ಶಮೀರಾ ಬೆಳುವಾಯಿ

No comments:

Post a Comment