Wednesday, November 12, 2014

ನಾ ಬೆಳ್ಳಕ್ಕಿ............

                    ನಾ ಹಕ್ಕಿ ಹೌದು ನಾ ಬೆಳ್ಳಕ್ಕಿ. ನಗರದವರಿಗೆ ಅಪರೂಪ, ಹಳ್ಳಿಯವರಿಗೆ ಬಲುರೂಪ. ಕೈ ಕೆಸರಾದರೆ ಬಾಯಿ ಮೊಸರು ಇದು ನಿಮ್ಮಂಥ ಮನುಷ್ಯರಿಗಿರುವ ಗಾದೆ. ಆದರೆ ನಮಗೆ ಕಾಲೂ ಕೆಸರಾಗಬೇಕು ಜೊತೆಗೆ ಕೊಕ್ಕೂ ಕೆಸರಾಗಬೇಕು ಆಗಲೇ ಹೊಟ್ಟೆ ತುಂಬುವುದು.
     
                    ನನ್ನ ಮೈಮಾಟಕ್ಕೆ ಬೆರಗಾಗುತ್ತಾರೆ ಮನುಷ್ಯರು... ನನ್ನ ನೀಳವಾದ ತೆಳು ದೇಹ, ಒಂಟಿಕಾಲಿನ ನಾಟ್ಯ, ಕೆಸರಲ್ಲಿ ಕೆಲಸವಾದರೂ ಮಾಸಿಹೋಗದ ಬಿಳಿಯ ವರ್ಣ, ಉಪಕಾರಿಯಾದ ಉದ್ದ ಕೊಕ್ಕು ಆಹಾ ಆದರೂ ನನಗಿಲ್ಲ ಸೊಕ್ಕು. ನನ್ನ ಕಂಡವರೆಲ್ಲ ನನ್ನಿಂದ ಆಕರ್ಷಿತರಾಗಿ ನನ್ನ ಥರಾನೆ ಉದ್ದವಾದ ಸ್ಲಿಮ್ ದೇಹಕ್ಕೆ ಬಿಳಿ ವಸ್ತ್ರತೊಟ್ಟು ಒದ್ದೆಯಾಗ್ತಾರೆ ಯಾಕೋ ಗೊತ್ತಿಲ್ಲ. ಆದ್ರೆ ನನ್ನದಿದು ವೇಷವಲ್ಲ. ನಮ್ಮವರ ಶಿಸ್ತಿಗೆ, ನಾವು ಪಯಣಿಸುವ ರೀತಿಗೆ, ನಮ್ಮ ನೀತಿಗೆ ಬೆರಗಾಗುವ ಕವಿಗಳು ಅವರ ಕವನದ ಸಾಲಲ್ಲಿ ನಮಗೆ ಸ್ಥಾನ ಕೊಡುತ್ತಾರೆ. ಮೊದಲಾದರೆ ನಾವು ಮನೆಗೆ ತೆರಳುವ ಸಮಯಕ್ಕೆ ಸರಿಯಾಗಿ ಗದ್ದೆಯಲ್ಲಿದ್ದ ಹೆಂಗಸರೆಲ್ಲ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಹೊಲದೆಜಮಾನ ನನಗೆ ಶಾಪ ಹಾಕಿದ್ದೂ ಇದೆ ಇಷ್ಟು ಬೇಗ ಹಕ್ಕಿಗಳಿಗೆ ಯಾಕಾದರೂ ಕತ್ತಲಾಗುತ್ತದೆ ಎಂದು. ಆದರೆ ಅವರಿಗೆ ಗೊತ್ತಿಲ್ಲ ನಮಗೆ ಬೆಳಗಾಗುವುದೂ ಬೇಗ ಎಂದು. ಬಿಡಿ ಈಗ ಶಾಪವೂ ಇಲ್ಲ ಹಾರೈಕೆಯೂ ಇಲ್ಲ ಯಾಕೆಂದರೆ ಗದ್ದೆ ಕೆಲಸಗಳೇ ಇಲ್ಲ. ಬರೀ ವಾಚು, ಮೊಬೈಲುಗಳ ಕಾಲ, ಇವುಗಳೇ ಎಲ್ಲ.

                    ಕೊಳಕನ್ನು ತಿಂದರೂ ಹೊಳಪನ್ನು ಪಡೆದಿದ್ದೇವೆ ನಾವು. ನಮಗಿಷ್ಟವೆ ನಿಂತ ನೀರಲ್ಲಿ ಬೆಳೆವ ಕೊಳೆವ ಹುಳ-ಹುಪ್ಪಡಿಗಳು. ಆದರೇನು ಮಾಡುವುದು ಹರಿದು ಹೋಗುವಷ್ಟು ಬಿಡಿ, ಭೂಮಿ ಸ್ವಲ್ಪ ಒದ್ದೆಯಾಗುವಷ್ಟೂ ಮಳೆ ಬರುವುದಿಲ್ಲ. ನಮ್ಮ ಜೀವನ ಕಷ್ಟವಾಗಿದೆ. ಆಹಾರಕ್ಕಾಗಿ ಊರೂರು ಅಲೆಯಬೇಕಾದ ಅಲೆಮಾರಿಗಳಾಗಿದ್ದೇವೆ. ನಮ್ಮ ಹಿರಿಯರಿಗೆ ಆಹಾರ ಹುಡುಕಿ ತಿನ್ನುವಷ್ಟು ಶಕ್ತಿಯಿಲ್ಲದೆ ಮುಕ್ತಿ ಪಡೆಯುತ್ತಿದ್ದಾರೆ ಬೇರೆ ಲೋಕಕ್ಕೆ. ಬದುಕಿರುವ ನಮ್ಮ ಕಥೆ ಯಾಕೆ ಕೇಳ್ತೀರ ಅಯ್ಯೋ ಸಾಕೆನಿಸಿದೆ ಹೆಕ್ಕಿ ತಿನ್ನುವ ಹಕ್ಕಿಯ ಹುಟ್ಟು. ನನಗೂ ಬಾಚಿ ತಿನ್ನುವ ನಿಮ್ಮಂತಾಗಬೇಕು, ಸ್ವಲ್ಪ ಅಡ್ಡವೂ ಬೆಳೆಯಬೇಕು. ಏನಂತೀರಾ...
             

                     * -  ಸೌಮ್ಯಶ್ರೀ...

1 comment:

  1. ನಗರದವರಿಗೆ ಅಪರೂಪ, ಹಳ್ಳಿಯವರಿಗೆ ಬಲುರೂಪ.
    ಉಪಕಾರಿಯಾದ ಉದ್ದ ಕೊಕ್ಕು ಅಹಾ ಆದರೂ ನನಗಿಲ್ಲ ಸೊಕ್ಕು.
    ನನ್ನಿಂದ ಆಕರ್ಷಿತರಾಗಿ ನನ್ನ ತರನೆ ಉದ್ದವಾದ ಸ್ಲಿಮ್ ದೇಹಕ್ಕೆ ಬಿಳಿ ವಸ್ತ್ರ ತೊಟ್ಟು ಒದ್ದೆಯಾಗ್ತಾರೆ.
    ನಮ್ಮವರ ಶಿಸ್ತಿಗೆ, ನಾವು ಪಯಣಿಸುವ ರೀತಿಗೆ, ನಮ್ಮ ನೀತಿಗೆ ಬೆರಗಾಗುವ ಕವಿಗಳು.
    ಈಗ ಶಾಪವೂ ಇಲ್ಲ ಹಾರೈಕೆಯೂ ಇಲ್ಲ ಯಾಕೆಂದರೆ ಗದ್ದೆ ಕೆಲಸಗಳೇ ಇಲ್ಲ. ಬರೀ ವಾಚು, ಮೊಬೈಲುಗಳ ಕಾಲ, ಇವುಗಳೇ ಎಲ್ಲ.
    ಕೊಳಕನ್ನು ತಿಂದರೂ ಹೊಳಪನ್ನು ಪಡೆದಿದ್ದೇವೆ ನಾವು.
    ನಿಂತ ನೀರಲ್ಲಿ ಬೆಳೆವ ಕೊಳೆವ ಹುಳ-ಹುಪ್ಪಡಿಗಳು.
    ಹಿರಿಯರಿಗೆ ಆಹಾರ ಹುಡುಕಿ ತಿನ್ನುವಷ್ಟು ಶಕ್ತಿಯಿಲ್ಲದೆ ಮುಕ್ತಿ ಪಡೆಯುತ್ತಿದ್ದಾರೆ.
    ಅಯ್ಯೋ ಸಾಕೆನಿಸಿದೆ ಹೆಕ್ಕಿ ತಿನ್ನುವ ಹಕ್ಕಿಯ ಹುಟ್ಟು. ನನಗೂ ಬಾಚಿ ತಿನ್ನುವ ನಿಮ್ಮಂತಾಗಬೇಕು, ಸ್ವಲ್ಪ ಅಡ್ಡವೂ ಬೆಳೆಯಬೇಕು.


    ಇವಿಷ್ಟು ನನಗೆ ಇಷ್ಟವಾದ ಸಾಲುಗಳು. ಅದ್ಭುತವಾಗಿದೆ. ಬೆಳ್ಳಕ್ಕಿಯಷ್ಟೆ ಸುಂದರವಾಗಿದೆ.

    ReplyDelete